

ಯಳಂದೂರು: ಯಳಂದೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಬುಧವಾರ ಶ್ರದ್ಧಾಭಕ್ತಿಗಳಿಂದ ಗಣೇಶ ಚತುರ್ಥಿ ಆಚರಿಸಲಾಯಿತು.
ಹಬ್ಬದ ನಿಮಿತ್ತ ತಾಲೂಕಿನ ಐತಿಹಾಸಿಕ ಎಳೆಪಿಳ್ಳಾರಿ ವಿನಾಯಕ ದೇವರ ಸನ್ನಿಧಿ ಪಟ್ಟಣದ ವರಾಹಸ್ವಾಮಿ ದೇಗುಲದ ಬಲಬದಿಯಲ್ಲಿರುವ ಗೋಡೆ ಗಣಪತಿ ದೇಗುಲ ಹಾಗೂ ಪಟ್ಟಣದ ಬಳೇಪೇಟೆಯಲ್ಲಿರುವ ಬಲಮುರಿ ವಿನಾಯಕ ದೇಗುಲಗಳಲ್ಲಿ ವಿಶೇಷ ಅಲಂಕಾರದೊಂದಿಗೆ ಪೂಜೆ ನೆರವೇರಿಸಲಾಯಿತು.
ತಾಲೂಕಿನ ಹಲವು ಗ್ರಾಮಗಳ ಬೀದಿಬೀದಿಗಳಲ್ಲೂ ಹಸಿರು ಚಪ್ಪರ ಹಾಕಿ ಸಿಂಗರಿಸಿ, ಯುವಕರು ಹಾಗೂ ಮಕ್ಕಳು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಕೆಲವರು ತಮ್ಮ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿವಿಧ ಭಕ್ಷ್ಯ, ಹಣ್ಣು, ನೈವೇದ್ಯ ಇರಿಸಿ ಪ್ರತಿಷ್ಠಾಪಿಸಿ ಸೋಮವಾರವೇ ಮನೆಯಲ್ಲಿ ದೊಡ್ಡದೊಡ್ಡ ಪಾತ್ರೆಗಳಲ್ಲಿ ನೀರು ಹಾಕಿ ವಿಸರ್ಜನೆ ಮಾಡಿದರೆ ಕೆಲವರು ಪಟ್ಟಣ ಪಂಚಾಯಿತಿ ವತಿಯಿಂದ ಪಪಂ ಕಚೇರಿಯ ಬಳಿಯಲ್ಲೇ ನಿರ್ಮಿಸಿರುವ ತಾತ್ಕಾಲಿಕ ಗಣೇಶ ಮೂರ್ತಿ ವಿಸರ್ಜನ ಹೊಂಡದಲ್ಲಿ ವಿಸರ್ಜನೆ ಮಾಡಿದರು. ಕೆಲವರು ಕಬಿನಿ ಕಾಲುವೆ ಹಾಗೂ ಕೆರೆಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿದರು. ಪಟ್ಟಣದ ದೊಡ್ಡಂಗಡಿ ಬೀದಿ, ಬಳೇಪೇಟೆಯ ಅಂಗಡಿ ಮುಂಗಟ್ಟು ಹಾಗೂ ಹಳೇ ಅಂಚೆಕಚೇರಿ ರಸ್ತೆಯಲ್ಲಿ ಕಟ್ಟಿದ್ದ ಸಂತೆಯಲ್ಲಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.
ಬಿಳಿಗಿರಿರಂಗನ ಬೆಟ್ಟಕ್ಕೆ ಭಕ್ತರ ದಂಡು: ಹಬ್ಬದ ಮಾರನೇ ದಿನವಾದ ಬುಧವಾರ ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಜನಜಾತ್ರೆಯೇ ನೆರೆದಿತ್ತು. ಗೌರಿ-ಗಣೇಶ ಹಬ್ಬದ ಮಾರನೇ ದಿನ ವರ್ಷದ ತೊಡಕು ಆಚರಿಸುವ ವಾಡಿಕೆ ಈ ಭಾಗದಲ್ಲಿದೆ. ಈ ದಿನ ತಮ್ಮ ಮನೆ ದೇವರ ದರ್ಶನ ಪಡೆಯುವ ಸಂಪ್ರದಾಯವಿದೆ. ದಾಸ ಪರಂಪರೆ ಈ ಭಾಗದಲ್ಲಿ ಹೆಚ್ಚಾಗಿದ್ದು, ಹೆಚ್ಚಿನ ಜನರು ಬಿಳಿಗಿರಿರಂಗನಬೆಟ್ಟಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಮಾಡಿ, ಅಲ್ಲಿನ ಅಂಗಳದಲ್ಲೇ ಬ್ಯಾಟೆ ಮನೆ ಸೇವೆ ಮಾಡಿ, ಶಂಖ, ಜಾಗಟೆಗಳ ನಾದ ಮೊಳಗಿಸಿ ವಾಪಸಾಗುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ನೂರಾರು ಜನರು ಬೆಟ್ಟಕ್ಕೆ ತೆರಳಿದರು. ಆದರೆ ಬಸ್‌ಗಳು ಇಲ್ಲದ ಕಾರಣ ನಿಲ್ದಾಣದಲ್ಲಿ ಜನಜಂಗುಳಿ ಅಧಿಕವಾಗಿತ್ತು.
ಹಬ್ಬವಾದ ಮಾರನೇ ದಿನವಾದ ಗುರುವಾರ ದೇವರಗುಡ್ಡರು ಹಾಗೂ ದಾಸಯ್ಯರು ತಮ್ಮ ಅನಾದಿ ಕಾಲದ ಪದ್ಧತಿಯಂತೆ ಗುಂಪುಗುಂಪಾಗಿ ತೆರಳಿ ಅಂಗಡಿ ಬೀದಿ ಹಾಗೂ ಮನೆ-ಮನೆಗಳಿಗೆ ತೆರಳಿ ಬಿಕ್ಷಾಟನೆ ನಡೆಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.