

ಕೊಪ್ಪಳ: ಸಾಮಾನ್ಯವಾಗಿ ಗಣೇಶ ಚೌತಿಯಂದು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಭಾಗ್ಯನಗರದಲ್ಲಿ ಬೆನಕನ ವಾಹನ ಮೂಷಿಕನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸುವುದು ವಿಶೇಷ.
ಚತುರ್ಥಿಯಂದು ಗಣೇಶನನ್ನು ಪ್ರತಿಷ್ಠಾಪಿಸುವ ಜನ, ಮರು ದಿನ ಇಲಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಅದರಂತೆ ಭಾನುವಾರ ಮೂಸಿಕನ ಆರಾಧನೆ ಕಂಡುಬಂತು. ಹೋಳಿಗೆ, ಕಡುಬು, ಮೋದಕ ಅರ್ಪಿಸಿದರು. ನೇಕಾರ ಸಮುದಾಯ, ನೂಲುವ ಮತ್ತು ಟೇಲರಿಂಗ್ ಕೆಲಸ ಮಾಡುವ ಕುಟುಂಬಗಳು ಪೂಜೆ ಸಲ್ಲಿಸಿದವು. ಕೆಲವರು ಜೀವಂತ ಇಲಿಗೂ ಪೂಜೆ ಮಾಡುತ್ತಾರೆ. ಭಾಗ್ಯನಗರದ ಬಹುತೇಕ ಕುಟುಂಬ ನೇಕಾರಿಗೆ ನೆಚ್ಚಿಕೊಂಡು ಜೀವನ ಮಾಡುತ್ತಿವೆ.
ಸೀರೆ ನೇಯುವ ನೂಲು, ಸಿದ್ದವಾದ ಸೀರೆ ಮತ್ತು ಯಾವುದೇ ಬಟ್ಟೆಯನ್ನು ಇಲಿ ಕಚ್ಚಿ ಹಾಳು ಮಾಡದಿರಲಿ, ಕಾಟ ಕೊಡದಿರಲಿ ಎಂಬ ಉದ್ದೇಶದಿಂದ ಹಿಂದಿನಿಂದಲೂ ಈ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ಮುಸ್ಲಿಮ್ ಕುಟುಂಬಗಳೂ ನೇಕಾರಿಕೆ ನಡೆಸುತ್ತಿದ್ದೂ ಅವರು ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆಯುತ್ತಿದ್ದಾರೆ.