ಅಹಿಂಸೆಯ ವೇಗ ತೀವ್ರವಾಗಲಿ ; ಏಕ್ತಾ ಪರಿಷತ್ ಸಂಸ್ಥಾಪಕ, ಹಿರಿಯ ಗಾಂಧೀವಾದಿ ರಾಜಗೋಪಾಲ್ ಸಲಹೆ

11Tmk_Sahaja_Besaya_02
Published on

ತುಮಕೂರು ; ಜಾಗತಿಕ ಮಟ್ಟದಲ್ಲಿ ಹಿಂಸೆ ವೇಗವಾಗಿ ವ್ಯಾಪಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಅಹಿಂಸೆಯ ವೇಗ ತೀವ್ರವಾಗಬೇಕು ಎಂದು ಏಕ್ತಾ ಪರಿಷತ್ ಸಂಸ್ಥಾಪಕ, ಹಿರಿಯ ಗಾಂಧೀವಾದಿ ಪಿ.ವಿ.ರಾಜಗೋಪಾಲ್ ಹೇಳಿದರು.

ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿಯ ದೊಡ್ಡಹೊಸೂರು ರೈತ ರವೀಶ್ ತೋಟದಲ್ಲಿ ನಿರ್ಮಿಸಿರುವ ಗಾಂಧಿ ಸಹಜ ಬೇಸಾಯ ಆಶ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಅಹಿಂಸೆಯ ಬಗ್ಗೆ ಮಾತನಾಡಲು ಹಿಂಜರಿಯುವ ಸಂದರ್ಭದಲ್ಲಿ ಗಾಂಧಿ ಸಹಜ ಬೇಸಾಯ ಆಶ್ರಮ ನಡೆಸುತ್ತಿರುವ ಪ್ರಯೋಗ ಶ್ಲಾಘನೀಯ ಎಂದರು.

ಅಹಿಂಸಾತ್ಮಕ ಕೃಷಿಯನ್ನು ಉದ್ದೇಶವಾಗಿಟ್ಟುಕೊಂಡಿರುವುದು ಮಾತ್ರವಲ್ಲ, ಗಾಂಧಿ ತತ್ವಗಳು, ಗ್ರಾಮ ಸ್ವರಾಜ್ಯ, ಸಹಜ ಬೇಸಾಯದಲ್ಲಿ ಯುವಕರ ಭಾಗವಹಿಸುವಿಕೆ, ಜಾಗತಿಕ ತಾಪಮಾನ ಈ ವಿಷಯಗಳನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸಲು ಮುಂದಾಗಿದೆ. ಮಾತೃಸ್ವರೂಪವನ್ನು ಶೋಷಿಸುತ್ತಿದ್ದೇವೆ. ಗಂಗೆಯನ್ನು ಮಾಲಿನ್ಯ ಮಾಡಿದ್ದೇವೆ. ಭೂಮಿಗೆ ವಿಷವುಣಿಸುತ್ತಿದ್ದೇವೆ, ಹಾಗೆಯೇ ಸರಸ್ವತಿ, ಲಕ್ಷ್ಮೀಯರನ್ನು ಮಾತೆ ಎಂದು ಕರೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

2003 ರಿಂದ 2019ರವರೆಗೆ ಜಾಗತಿಕ ಮಟ್ಟದಲ್ಲಿ ಯುದ್ಧಕ್ಕೋಸ್ಕರ ಖರ್ಚಾದ ಹಣ 1900 ಬಿಲಿಯನ್ ಡಾಲರ್. ಸುಮಾರು 30 ಯುರೋಪಿಯನ್ ದೇಶಗಳ ಬಜೆಟ್ ಇದಾಗಿದೆ. ಅಹಿಂಸೆ ಬಗ್ಗೆ ಯುವಜನರಲ್ಲಿ ತಪ್ಪುಕಲ್ಪನೆ ಬಿಂಬಿಸಲಾಗುತ್ತದೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ವೇಗ, ಆವೇಗ, ಉದ್ವೇಗ ಕಳೆದುಕೊಳ್ಳದೆ ಸಹಜ ಬೇಸಾಯ ಮಾಡಲು ಸಾಧ್ಯವಿಲ್ಲ. ಸಹಜ ಬೇಸಾಯ ಬದುಕಿನ ಅಂಗ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

ಶ್ರಮಜೀವನದಲ್ಲಿ ನೆಮ್ಮದಿಯಿತ್ತು. ನಾವೀಗ ಅಸಹಜ ಪ್ರಾಣಿಯಾಗಿದ್ದೇವೆ. ಈ ಆಶ್ರಮ ಕ್ರಮವಾಗಿ ಸಹಜಪ್ರಾಣಿಯನ್ನಾಗಿಸಬೇಕಿದೆ. ಭಾಷೆಯ ಅಳಿವಿಗೂ ಅಸಹಜ ಜೀವನ ಶೈಲಿಯೇ ಕಾರಣ. ಇವೆಲ್ಲವನ್ನು ಸಮಗ್ರವಾಗಿ ನೋಡುವುದನ್ನು ಆಶ್ರಮ ಹೇಳಿಕೊಡಬೇಕು. ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಗೊತ್ತಿಲ್ಲ, ಅದನ್ನು ಹೇಳಿಕೊಡುವ ಮೂಲಕ ಮರುರೂಪಿಸುವ ಕೆಲಸ ಆಗಬೇಕಿದೆ ಎಂದರು.

ರಾಷ್ಟ್ರೀಯ ಸ್ವಾಭಿಮಾನ್ ಪರಿಷತ್ತಿನ ರಾಷ್ಟ್ರೀಯ ಸಂಯೋಜಕ ಬಸವರಾಜ್ ಪಾಟೀಲ್ ವೀರಾಪುರ ಮಾತನಾಡಿ, ಕೃಷಿ ಅತಿಹೆಚ್ಚು ವೃತ್ತಿ ನೀಡುವ ಉದ್ಯಮ. ಬದಲಾವಣೆಯೆಂಬುದು ಇಲ್ಲಿಂದಲೇ ಆಗಬೇಕು. ವರ್ತೂರು ನಾರಾಯಣರೆಡ್ಡಿ ನಂತರ ಸಹಜ ಕೃಷಿಯನ್ನು ಮುನ್ನಡೆಸುವಂತಹ ಕಾರ್ಯವನ್ನು ಸಹಜ ಕೃಷಿ ವಿಜ್ಞಾನಿ ಡಾ.ಎಚ್.ಮಂಜುನಾಥ್ ಅವರು ಆಶ್ರಮದ ಮೂಲಕ ಮಾಡುತ್ತಿದ್ದಾರೆ. ಇದು ದೇಶಾದ್ಯಂತ ವ್ಯಾಪಿಸಬೇಕಿದೆ ಎಂದರು.

ಜೀವ ವೈವಿಧ್ಯತೆಯ ಜೊತೆಗೆ ರಾಜಕೀಯ, ಆರ್ಥಿಕತೆ ಕೃಷಿ ಎಲ್ಲವೂ ಸಹಜತೆ ಮತ್ತು ಆಧ್ಯಾತ್ಮಿಕತೆ ಒಳಗೊಳ್ಳಬೇಕು ಎಂದು ಗುಡ್ ಅರ್ಥ್ ಸಂಸ್ಥೆಯ ಮುಖ್ಯಸ್ಥ ಸ್ಟಾನ್ಲಿ ಜಾರ್ಜ್ ಹೇಳಿದರು.

ತುಮಕೂರು ವಿಜ್ಞಾನ ಕೇಂದ್ರದ ಬಿ.ಮರುಳಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹಜ ಬೇಸಾಯ ಶಾಲೆ ನಡೆದುಬಂದ ಬಗ್ಗೆ ಸಿ. ಯತಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಮಂಜುನಾಥ್ ವಂದಿಸಿದರು. ಡಾ.ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಸಂತೋಷದಿಂದ ಸಹಜ ಬೇಸಾಯ ಮಾಡಬೇಕು. ಇದು ಭಾವನೆಗಳು, ಅನುಭವಗಳ ಮೂಲಕ ಎಲ್ಲ ಕಡೆಯೂ ಪಸರಿಸುತ್ತೆ. ಡಾ.ಮಂಜುನಾಥ್ ಅವರ ಸಂಪರ್ಕಕ್ಕೆ ಬಂದ ಮೇಲೆ ಸಹಜ ಬೇಸಾಯ ಅಳವಡಿಸಿಕೊಂಡೆ. ಆಶ್ರಮ ಎಂದರೆ ಶ್ರಮವನ್ನು ಒಳಗೊಂಡಿರುತ್ತದೆ. ಅದು ಪ್ರಸನ್ನ ಅವರ ಚರಕ ಸಂಸ್ಥೆಗೆ ಭೇಟಿ ಕೊಟ್ಟಾಗ ಅರಿವಾಯಿತು. ರಾಜ್ಯ, ದೇಶಗಳನ್ನು ಮೀರಿ ಸಹಜ ಕೃಷಿ ಹರಡುವ ಭರವಸೆ ಇದೆ. ಮಹಿಮಾ ಪಟೇಲ್, ಸಾಮಾಜಿಕ, ರಾಜಕೀಯ ಚಿಂತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net