

ಚನ್ನಗಿರಿ: ಧರ್ಮಸ್ಥಳ ಗ್ರಾಮಾಭಿವೃದ್ಧ್ದಿ ಯೋಜನೆ ರಾಜ್ಯದಲ್ಲಿ ನಿಸ್ವಾರ್ಥವಾಗಿ ಸೇವೆ ನೀಡುತ್ತಾ ಬಂದಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ಶ್ಲಾಘಿಸಿದರು.
ತಾಲೂಕಿನ ನಲ್ಲೂರು ಗ್ರಾಮದ ಶಾದಿಮಹಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಮ್ಮಿಕೊಂಡಿದ್ದ ದುಶ್ಚಟ ಮುಕ್ತ ಸಮಾಜಕ್ಕಾಗಿ ಗಾಂಧಿಸ್ಮತಿ ಕಾರ್ಯಕ್ರಮ ಹಾಗೂ ನವಜೀವನ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸ್ವಾರ್ಥ ತುಂಬಿದೆ. ಎಲ್ಲದರಲ್ಲೂ ನನಗೇನು ಲಾಭ ಎಂಬುದನ್ನೇ ಬಯಸುತ್ತಾರೆ. ಆದರೆ, ಧರ್ಮಸ್ಥಳ ಸಂಸ್ಥೆ ನಿಸ್ವಾರ್ಥತೆಯಿಂದ ರಾಜ್ಯದ ಜನರ ಸೇವೆ ಮಾಡುತ್ತಾ, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಮುಂದಾಗಿದ್ದಾರೆ ಎಂದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಜೀವನ ನಡೆಸುವಂತಹ ಆರ್ಹತೆ ಪಡೆದಿದ್ದಾರೆ. ಕುಟುಂಬದಲ್ಲಿ ಹೆಣ್ಣು ಮಗು ಬೇಡ ಎಂದವರು, ಇಂದು ಮನೆಯಲ್ಲಿ ಹೆಣ್ಣು ಇದ್ದರೆ ಸಾಕು ಎನ್ನುವ ಮಟ್ಟಿಗೆ ಸಮಾಜ ಬೆಳೆದಿದೆ ಎಂದು ಹೇಳಿದರು.
ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿ ಶ್ರೀಧರ್, ರವಿಚಂದ್ರ, ನಲ್ಲೂರು ಗ್ರಾಪಂ ಅಧ್ಯಕ್ಷೆ ಜಿ.ಎಚ್. ಪೂರ್ಣಿಮಾ, ಕಾಂಗ್ರೆಸ್ ಮುಖಂಡ ಇಮ್ತಿಯಾಜ್, ಗ್ರಾಪಂ ಸದಸ್ಯ ಜನಾರ್ಧನ್, ಜನಜಾಗೃತಿ ಸದಸ್ಯರಾದ ಶರಣಪ್ಪ, ಆರ್. ಮಂಜಪ್ಪ, ಮಹೇಶ್ವರಪ್ಪ, ಚನ್ನಬಸಪ್ಪ ಇದ್ದರು.