ಸೌಹಾರ್ದತೆಗೆ ಕಾರಣವಾಗಿದ್ದ ಗಾಂಧಿ ನಾಯಕತ್ವ

ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
ಬೇಲೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು.
Published on

ಬೇಲೂರು; ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಅಹಿಂಸ ಮಾರ್ಗದ ಹೋರಾಟದಿಂದಾಗಿ ದೇಶಕ್ಕೆ ಸ್ವಾತಂತ್ರೃ ಲಭಿಸಿದರೆ, ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ತ್ಯಾಗ ಮತ್ತು ಬಲಿದಾನ ನಮಗೆ ಆದರ್ಶಪ್ರಾಯ. ಹಾಗಾಗಿ ಈ ಇಬ್ಬರು ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಸಲಹೆ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ನಾಯಕತ್ವದ ಗುಣ ಭಾರತದ ಎಲ್ಲ ಧರ್ಮಿಯರಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಕಾಪಾಡಲು ಕಾರಣವಾಗಿತ್ತು. ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಕಾಣುವುದರಿಂದ ಒಂದಾಗಿ ಹೋರಾಟ ನಡೆಸಲು ಪ್ರೇರಣೆಯಾಯಿತು ಎಂದರು.

ಲಾಲ್ ಬಹಾದೂರ್ ಶಾಸ್ತ್ರಿ ಅವರು ಅಲ್ಪಾವಧಿಯಲ್ಲೇ ಮಹಾನ್ ಸಾಧನೆ ಮಾಡುವ ಮೂಲಕ ದೇಶದ ಜನರಿಗೆ ಜೈಜವಾನ್-ಜೈಕಿಸಾನ್ ಎಂಬ ಕರೆ ನೀಡಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದೇಶದ ಪ್ರಜೆಗಳು ಸ್ವಚ್ಛ, ದಕ್ಷ, ಸಂಪೂರ್ಣ ಸಬಲೀಕರಣ ಮತ್ತು ಸಮೃದ್ಧ ಭಾರತ ನಿರ್ಮಿಸುವ ಕನಸುನ್ನು ನನಸಾಗಿಸಲು ಸಂಕಲ್ಪ ಮಾಡಬೇಕಿದೆ. ನಮ್ಮ ಮಾತುಗಳು ವೇದಿಕೆಗೆ ಸೀಮಿತವಾಗದೆ ಕೃತಿಯಲ್ಲಿ ಮೂಡಿದಾಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.

ಶರಣ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿ ಸೇರಿದಂತೆ ಶಾಂತಿ, ಸಹಿಷ್ಣುತೆಯೊಂದಿಗೆ ಸತ್ಯದ ಸಂದೇಶವನ್ನು ನಾಡಿಗೆ ನೀಡಿದ್ದಾರೆ. ಅಸ್ಪೃಶ್ಯತೆ, ಅನಕ್ಷರತೆ, ವ್ಯಸನ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ದರ್ಬಲ ವರ್ಗಗಳಿಗೆ ಶಕ್ತಿ ನೀಡಿದರು. ಲಾಲ್ ಬಹಾದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾದ ಸಂದರ್ಭ ಭಾರತವನ್ನು ಸ್ವಾವಲಂಬನೆಯತ್ತ ಕರೆದೊಯ್ಯಲು ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಇತಿಹಾಸ ನಿರ್ಮಿಸಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವಮರಿಯಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್. ತಾಪಂ ಕೆಡಿಪಿ ಸದಸ್ಯರಾದ ಚೇತನ್, ಜ್ಯೋತಿ, ದಯಾನಂದ್, ಗುರುಪ್ರಸಾದ್, ಅರೇಹಳ್ಳಿ ಮಸೀದಿ ಗುರುಗಳಾದ ಶರೀಪ್, ಫಾದರ್ ಜೋಸೆಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net