ಗಾಂಧೀಜಿ ಚಿಂತನೆ, ವಿಚಾರಧಾರೆ ವಿಶ್ವಕ್ಕೆ ಪ್ರೇರಣೆ ಗಾಂಧೀ ಪ್ರತಿಮೆಗೆ ಹಾರಾರ್ಪಣೆಗೈದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

mng-oct2-gandhi jayanthi2
Published on


ಮಂಗಳೂರು: ತ್ಯಾಗ, ಅಹಿಂಸೆಯ ಮೂಲಕ ಸಂದೇಶ ಸಾರಿದ ಮಹಾತ್ಮಗಾಂಧೀಜಿ ವಿಶ್ವಕ್ಕೆ ಪ್ರೇರಣೆ. ಅವರ ಚಿಂತನೆ, ವಿಚಾರಧಾರೆ ವಿಶ್ವದಾದ್ಯಂತ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.


ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿ.ಪಂ, ಮಂಗಳೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಜತೆಯಾಗಿ ಪುರಭವನದ ಎದುರು ಗಾಂಧಿ ಪ್ರತಿಮೆಯ ಬಳಿ ಬುಧವಾರ ಹಮ್ಮಿಕೊಂಡ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಗಾಂಧೀಜಿ ಅವರ ಮಾನವೀಯತೆ, ಶಾಂತಿ ಸಂದೇಶ, ಅವರ ಆತ್ಮವಿಶ್ವಾಸ, ಸ್ವಯಂಶಿಸ್ತಿನ ಮೂಲಕ ದೇಹದ ಬಲಕ್ಕಿಂತ ಮನಸ್ಸಿನ ಬಲವೇ ಹೆಚ್ಚು ಎನ್ನುವುದನ್ನು ತೋರಿಸಿದರು. ಗಾಂಧೀಜಿ ಬರೀ ವ್ಯಕ್ತಿ, ವ್ಯಕ್ತಿತ್ವಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅವರ ಆದರ್ಶವನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ದೇಶದ ಪ್ರಗತಿಗೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಮರಿಸಿದರು.


ಈ ಸಂದರ್ಭ ವಾರ್ತಾ ಇಲಾಖೆಯ ಪ್ರಾಥಮಿಕ, ಪ್ರೌಢ, ಪದವಿ, ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸ್ವಚ್ಛತಾ ಹೀ ಸೇವಾ ಅಭಿಯಾನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಜಿಲೆಯ ಎಂಟು ಗ್ರಾ.ಪಂ.ನ ಪಿಡಿಒ, ಘನ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಯನ್ನು ಗೌರವಿಸಲಾಯಿತು.


ಈ ಸಂದರ್ಭ ದ.ಕ.ಜಿ.ಪಂ. ಸಿಇಒ ಡಾ.ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಮಂಗಳೂರು ನಗರ ಪಾಲಿಕೆ ಕಮೀಷನರ್ ಆನಂದ್ ಸಿ.ಎಲ್, ದ.ಕ. ಎಸ್ಪಿ ಯತೀಶ್, ವಾರ್ತಾಧಿಕಾರಿ ಖಾದರ್ ಶಾ, ಸೇವಾದಳದ ಪ್ರಮುಖರಾದ ಟಿ.ಕೆ. ಸುಧೀರ್, ಮಂಜೇಗೌಡ, ಬಶೀರ್ ಬೈಕಂಪಾಡಿ, ಪ್ರಭಾಕರ್ ಶ್ರೀಯಾನ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಸೇವಾದಳದ ವಿದ್ಯಾರ್ಥಿಗಳಿಗೆ ಗಾಂಧೀಜಿಯ ಕುರಿತು ರಸಪ್ರಶ್ನೆ ಕಾರ‌್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net