ಗಾಂಧಿ ತತ್ವಗಳು ಜೀವನದ ನಿತ್ಯ ಸತ್ಯಗಳು

30 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾತ್ಮ ಗಾಂಧೀಜಿ ತಮ್ಮ ಜೀವನದುದ್ದಕ್ಕೂ ಬೋಧಿಸಿದ ತತ್ವಗಳು ನಮ್ಮ ಜೀವನದ ನಿತ್ಯ ಸತ್ಯಗಳಾಗಿವೆ. ಅವರ ಬದುಕಿನ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆ, ಸಾಮರಸ್ಯ ಮೂಡುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಹಾತ್ಮ ಗಾಂಧಿಜಿ ಪುಣ್ಯತಿಥಿ ನಿಮಿತ್ತ ಆಯೋಜಿಸಿದ್ದ ಹುತಾತ್ಮರ ದಿನ ಹಾಗೂ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧೀಜಿ ಯಾವುದೇ ಉಪದೇಶ ನೀಡುವ ಮೊದಲು ಸ್ವತಃ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಅವರ ನಡೆ, ನುಡಿ ಒಂದಾಗಿತ್ತು. ಅವರ ಬದುಕಿನ ರೀತಿ ಅವರನ್ನು ವಿಶ್ವ ನಾಯಕರನ್ನಾಗಿಸಿದೆ. ಇಂದಿನ ಅನೇಕ ಸಾಮಾಜಿಕ ಪಿಡುಗಗಳ ಬಗ್ಗೆ ಅಂದೇ ಗಾಂಧೀಜಿ ಹೋರಾಟ ಆರಂಭಿಸಿದ್ದರು. ಸಮಾಜದ ಎಲ್ಲ ವರ್ಗಗಳಲ್ಲಿ ಜಾತಿ, ಧರ್ಮ, ಲಿಂಗ, ವಯಸ್ಸು ಬೇಧವಿಲ್ಲದೆ ಸಮಾನತೆ ಕಾಣಬೇಕೆಂಬುದು ಅವರ ಆಶಯ ಮತ್ತು ನಿಲುವಾಗಿತ್ತು ಎಂದರು.

ಕುಷ್ಠರೋಗ ಮುಕ್ತ ರಾಷ್ಟ್ರ ನಿರ್ಮಾಣ ಗಾಂಧಿಜಿ ಕನಸಾಗಿತ್ತು. ಅವರು ಆಶ್ರಮದಲ್ಲಿ ಕುಷ್ಠರೋಗಿಗಳ ಆರೈಕೆ ಮಾಡುತ್ತಿದ್ದರು. ಅವರ ಪುಣ್ಯತಿಥಿ ಅಂಗವಾಗಿ ಆರೋಗ್ಯ ಇಲಾಖೆ ಜಿಲ್ಲೆಯಾದ್ಯಂತ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 65 ಜನ ಕುಷ್ಠ ರೋಗಿಗಳನ್ನು ಗುರುತಿಸಿದ್ದು, ಅಗತ್ಯ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಡಾ. ಎಸ್​.ಎಂ.ಹಿರೇಮಠ, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಎಸ್​.ಬಿ. ಕಳಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್​.ಪಾತ್ರೋಟ ನಿರೂಪಿಸಿದರು. ಡಾ. ಸುಜಾತಾ ಹಸವೀಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net