

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಂತಿ ನ್ಯಾಯ ಮತ್ತು ಸಮಾನತೆಯ ನಿರಂತರ ಮೌಲ್ಯಗಳಿಗೆ ಗಾಂಧಿಯವರ ಜೀವನ ಸಾಕ್ಷಿ. ಸತ್ಯಕ್ಕೆ ಅವರು ಮೊದಲ ಆದ್ಯತೆ ನೀಡಿದರು. ಈ ಕಲಿಯುಗ ಸಂಘರ್ಷ ಹಾಗೂ ವಿಭಜನೆಯ ಯುಗ. ಇಂತಹ ಸಮಯದಲ್ಲಿ ಗಾಂಧೀಜಿ ಅವರ ತತ್ವಗಳು ನಮಗೆಲ್ಲ ದಾರಿದೀಪ ಆಗಿವೆ. ಅವರಂತೆ ನಾವು ಸತ್ಯ ಅಹಿಂಸೆ ಬೆಳಕಿನಲ್ಲಿ ಮುನ್ನಡೆಯೋಣ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಲ್ಲಿ ಬುಧವಾರ ಏರ್ಪಡಿಸಿದ್ದ ಮಹ್ಮಾತ್ಮ ಗಾಂಧೀಜಿ, ಲಾಲ ಬಹಾದ್ದೂರ ಶಾಸ್ತ್ರಿ ಜಯಂತಿ ಹಾಗೂ ಹಿಂದಿ ದಿವಸ ಸಪ್ತಾಹದ ಸಮಾಪನಾ ಸಮಾರೋಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸ್ತ್ರೀಜಿ ಒಳ್ಳೆ ಆಡಳಿತಗಾರ. ಶಾಸ್ತ್ರಿಯವರು ಗಾಂಧಿ ಅವರ ರಾಜಕೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ರಾಜಕೀಯ ಜೀವನದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು, ದೇಶದ 2ನೇ ಪ್ರಧಾನಿ ಆಗಿ ಸೇವೆ ಸಲ್ಲಿಸಿದರು. ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರು, ಜೈ ಜವಾನ್ ಜೈ ಕಿಸಾನ್ ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದರು ಎಂದರು.
ಡಾ. ಗೋಪಾಲ ದಾಬಡೆ ಮಾತನಾಡಿ, ಗಾಂಧೀಜಿ ವಿಚಾರಗಳು ನಮಗೆಲ್ಲ ಸ್ಫೂರ್ತಿ. ಕೆಲವರು ಗಾಂಧಿ ವಿಚಾರಗಳ ಬಗ್ಗೆ ವಿರೊಧ ವ್ಯಕ್ತ ಪಡಿಸಿದ್ದರೂ ಅವು ಗಾಂಧಿ ವಿಚಾರಗಳಿಗೆ ಧಕ್ಕೆ ಮಾಡಲಾರವು ಎಂದರು.
ಹಿಂದಿ ದಿವಸದ ನಿಮಿತ್ತ ಸಂಸ್ಥೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಕೋಶಾಧ್ಯಕ್ಷ ಜಗದೀಶ ಮಳಗಿ, ಕಾರ್ಯದರ್ಶಿ ರಾಧಾಕೃಷ್ಣನ್, ಸದಸ್ಯರಾದ ಅಶೋಕ ಶೆಟ್ಟರ, ಉಮಾ ಚವ್ಹಾಣ, ನಾರಾಯಣ ಮೋರೆ, ಸಿಬ್ಬಂದಿ, ಇತರರು ಇದ್ದರು.