

ವಿಜಯಪುರ: ದೇಶಕ್ಕೆ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಕೊಡುಗೆ ಅಪಾರ. ಅವರ ತತ್ವ-ಸಂದೇಶಗಳನ್ನು ಪ್ರತಿಯೊಬ್ಬ ಭಾರತೀಯನೂ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಚರಕ ಸುತ್ತುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧಿ ಹಾಗೂ ಶಾಸ್ತ್ರಿ ಅವರ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ, ಸತ್ಯ, ಅಹಿಂಸಾ, ಸರಳತೆಯ ತತ್ವಾದರ್ಶಗಳನ್ನು ಹಾಗೂ ಅವರ ಜೀವನದ ಸಂದೇಶ ಮೌಲ್ಯಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಮಹತ್ವರ ಪಾತ್ರ ವಹಿಸಿ ಸತ್ಯ, ಅಹಿಂಸೆಯ ಹೋರಾಟದ ಹಾದಿ ಅನುಸರಿಸಿ ವಿಶ್ವಕ್ಕೆ ದೊಡ್ಡ ಸಂದೇಶ ಸಾರಿದವರು ಮಹಾತ್ಮ ಗಾಂಧೀಜಿಯವರು. ವಿಶ್ವಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನಾಚರಣೆಯನ್ನಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು ವಿಶ್ವ ಅವರನ್ನು ಗೌರವಿಸುವ ಪರಿಯಾಗಿದೆ ಎಂದು ಹೇಳಿದರು.
ತ್ಯಾಗ, ಸತ್ಯ, ಅಹಿಂಸೆಯಂತಹ ಇವರ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಸತ್ಯ ಶಾಂತಿ, ತ್ಯಾಗಮೂರ್ತಿಯಾದ ಇವರ ಜೀವನಾದರ್ಶ ಅರಿಯಬೇಕು. ಲಾಲ್ ಬಹದ್ದೂರ್ ಆಶ್ತ್ರಿ ಅವರು ನೀಡಿದ ‘ಜೈಜವಾನ್ ಜೈ ಕಿಸಾನ್’ ಘೋಷವಾಕ್ಯ ರೈತ ಹಾಗೂ ಸೈನಿಕರ ಬಗೆಗೆ ಅವರಿಗಿರುವ ಕಾಳಜಿ ಮತ್ತು ಗೌರವವನ್ನು ಎತ್ತಿ ತೋರಿಸುತ್ತದೆ ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಮಹನೀಯರ ಜೀವನದ ತತ್ವಗಳನ್ನು ಸ್ಮರಿಸಲು ಹಾಗೂ ಅವರಿಗೆ ಗೌರವ ಅರ್ಪಿಸಲು ಜಯಂತಿ ಆಚರಣೆ ಮಾಡುತ್ತೇವೆ. ಸ್ವಾತಂತ್ರೃ ಹೋರಾಟದ ಮುಂಚೂಣಿಯಲಿದ್ದ ಮಹಾತ್ಮ ಗಾಂಧಿ ಅವರು ಸಾಮಾಜಿಕ, ರಾಜಕೀಯ ಬದಲಾವಣೆಗೆ ದೇಶಾದ್ಯಂತ ಸಂಚರಿಸಿ ಜನರ ಸಮಸ್ಯೆ ಅರಿತು ಅವಿರತವಾಗಿ ಶ್ರಮಿಸಿದರು. ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ ಎಂಬ ಗ್ರಾಮ ಸ್ವರಾಜ್ಯ ಪರಿಕಲ್ಪನೆ ತಂದರು ಎಂದು ಹೇಳಿದರು.
ರಾಷ್ಟಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತಾಗಿ ಮೀನಾಕ್ಷಿ ಪಾಟೀಲ ಅವರು ಉಪನ್ಯಾಸ ನೀಡಿದರು.
ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಮೇಯರ್ ಮಹೇಜಬಿನ್ ಹೊರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಎಡಿಸಿ ಸೋಮಲಿಂಗ ಗೆಣ್ಣೂರ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಅಜೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಪೀಟರ್ ಅಲೆಕ್ಸಾಂಡರ್, ಅಶೋಕ ಘೋಣಸಗಿ, ಬಾಬುಗೌಡ ಪಾಟೀಲ ಮತ್ತಿತರರಿದ್ದರು.