

ಕೆ.ಆರ್.ನಗರ: ಗಾಂಧೀಜಿ ಹೋರಾಟದಿಂದಾಗಿ ನಾವು ಸ್ವಾತಂತ್ರ್ಯವಾಗಿ ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ಅದಕ್ಕಾಗಿ ಅವರನ್ನು ಸದಾ ಸ್ಮರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮ ಗಾಂಧೀಜಿ ಇಡೀ ಜಗತ್ತಿನ ನಾಯಕ ಎಂಬ ಗೌರವ ದೊರೆತಿರುವುದು ಭಾರತೀಯರಿಗೆ ಸಿಕ್ಕ ಹೆಗ್ಗಳಿಕೆ ಎಂದು ತಿಳಿಸಿದರು.
ಜಯಂತಿ ಆಚರಣೆ ಮತ್ತು ಭಾಷಣಗಳಿಂದ ಗಾಂಧೀಜಿ ಅವರ ಆಶಯಗಳು ಈಡೇರುವುದಿಲ್ಲ. ಅವರ ಬದುಕಿನ ಮೌಲ್ಯ ಮತ್ತು ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರಲಿದೆ. ಸ್ವಾತಂತ್ರ್ಯ ಪಡೆಯಲು ಕಾರಣರಾದ ಗಾಂಧೀಜಿ ಅವರು ದೇಶದ ಉತ್ಪನ್ನಗಳನ್ನು ಬಳಸುವಂತೆ ಮತ್ತು ಸರಳತೆಯ ಜೀವನ ನಡೆಸಲು ಕರೆ ನೀಡಿದ್ದರು. ಇದರಿಂದ ಪ್ರೇರಣೆಗೊಂಡು ಇಂದಿಗೂ ಹಲವರು ಸರಳ ಜೀವನ ನಡೆಸುತ್ತಿರುವುದನ್ನು ಕಾಣುತ್ತಿದ್ದೇವೆ. ಯುವಜನತೆ ಸರಳತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕೋರಿದರು.
ಲಾಲ್ ಬಹಾದೂರ್ ಶಾಸ್ತ್ರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಲ್ಲದೆ ಪ್ರಧಾನ ಮಂತ್ರಿಯಾದ ಸಂದರ್ಭದಲ್ಲಿ ಜೈ ಜವಾನ್ ಜೈ ಕಿಸಾನ್ ಘೋಷವಾಕ್ಯದೊಂದಿಗೆ ರೈತರಿಗೆ ಸಾಕಷ್ಟು ಅನುಕೂಲವಾಗುವಂಥ ಯೋಜನೆಗಳನ್ನು ಜಾರಿಗೆ ತಂದಿದ್ದರು. ಇಂಥ ಮಹಾತ್ಮರ ಜಯಂತಿಯನ್ನು ಮುಂದಿನ ವರ್ಷ ವಿನೂತನವಾಗಿ ಆಚರಣೆ ಮಾಡಲು ಕ್ರಮ ವಹಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಜಯಂತಿಗಳನ್ನು ಆಚರಣೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಲಿದೆ. ಆದ್ದರಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ, ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಈ ಇಬ್ಬರ ಜಯಂತಿಗಳನ್ನು ಹೊರತುಪಡಿಸಿ ಉಳಿದವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿದರು.
ಐವರು ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ವಿಜಯಲಕ್ಷ್ಮೀ ಪ್ರಧಾನ ಭಾಷಣ ಮಾಡಿದರು. ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿದರು. ಪುರಸಭೆ ಸದಸ್ಯ ಕೋಳಿಪ್ರಕಾಶ್, ಇಒ ಕುಲ್‌ದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಟಿಎಚ್‌ಒ ಡಾ.ಡಿ.ನಟರಾಜ್, ನೀರಾವರಿ ಇಲಾಖೆಯ ಎಇಇ ಅಯಾಜ್‌ಪಾಷ, ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ, ಸಿಪಿಐ ಶಿವಪ್ರಕಾಶ್, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ದೊಡ್ಡವಡ್ಡರಗುಡಿ ನಂದೀಶ್, ತಿಮ್ಮಶೆಟ್ಟಿ, ಕೆ.ಪಿ.ಜಗದೀಶ್, ಗೊರಗುಂಡಿಚಂದ್ರು, ಕಾಟ್ನಾಳ್‌ಮಹದೇವ್, ವ್ಯಾನ್‌ಸುರೇಶ್, ರಾಮಾಚಾರಿ ಇತರರು ಇದ್ದರು.