ಸೆ.2ರವರೆಗೆ ಚಾಕು ಇರಿತ ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ

29 smg mohamad jabhee
Published on

ಶಿವಮೊಗ್ಗ: ಗಾಂಧಿಬಜಾರ್‌ನಲ್ಲಿ ಪ್ರೇಮ್‌ಸಿಂಗ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಮೆಗ್ಗಾನ್‌ನಲ್ಲಿ ದಾಖಲಾಗಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಜಬೀ ಅಲಿಯಾಶ್ ಚರ್ಬಿಯನ್ನು ಸೆಪ್ಟಂಬರ್ 2ರವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಸೋಮವಾರ 5ನೇ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಶಿವಕುಮಾರ್ ಮುಂದೆ ದೊಡ್ಡಪೇಟೆ ಪೊಲೀಸರು ಹಾಜರಿ ಪಡಿಸಿದ್ದು ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಆ.15ರಂದು ಅಮೀರ್ ಅಹಮ್ಮದ್ ವೃತ್ತದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದದ ಬೆನ್ನಲ್ಲೇ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಪ್ರೇಮ್‌ಸಿಂಗ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದರು.

ಚೂರಿ ಇರಿತದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಜಬೀಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಕಾಲಿಗೆ ಗುಂಡು ಹಾರಿಸಿ ಜಬೀಯನ್ನು ಬಂಧಿಸಲಾಗಿತ್ತು.

ಮರುದಿನವೇ ಆತನನ್ನು ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಿಂದ ಗುಣಮುಖನಾದ ಜಬೀಯನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದಾರೆ. ಅದಕ್ಕೂ ಮೊದಲು ಈತನೊಂದಿಗೆ ಆರೋಪಿಗಳಾದ ತನ್ವೀರ್, ನದೀಮ್ ಮತ್ತು ರೆಹಮಾನ್‌ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net