ಸತ್ಯ, ಅಹಿಂಸೆ ಆಧಾರಿತ ಗಾಂಧಿ ಪ್ರಣಿತ ಭಾರತವೇ ನಮ್ಮ ಆದ್ಯತೆ

2 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೀಡಿರುವ ಸತ್ಯ, ಅಹಿಂಸೆ ಆಧಾರಿತ ಗಾಂಧಿ ಪ್ರಣಿತ ಭಾರತವೇ ನಮ್ಮ ಆದ್ಯತೆ. ಗಾಂಧೀಜಿ ಅವರ ಜೀವನ ಮೌಲ್ಯಗಳು ನಮಗೆ ದಾರಿದೀಪವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಹೇಳಿದರು.
ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 155ನೇ ಜಯಂತಿ ಹಾಗೂ ಲಾಲ್​ ಬಹದ್ದೂರ ಶಾಸ್ತ್ರಿ ಜನ್ಮದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ತಮ್ಮ ತತ್ವ ಸಿದ್ಧಾಂತಗಳ ಮೂಲಕ ವಿಶ್ವದ ಅನೇಕ ರಾಷ್ಟ್ರಗಳಿಗೆ ಆದರ್ಶವಾಗುವಂತ ಆಡಳಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರ ರಾಜಕೀಯ ಪ್ರವೇಶ ಭಾರತ ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. ಅವರ ವ್ಯಕ್ತಿತ್ವ, ಆದರ್ಶಮಯ ಜೀವನಕ್ಕೆ ಮಾರು ಹೋದ ಅನೇಕರು ಅವರಂತೆ ನಾಡಿಗೆ ಮಡಿದರು ಎಂದರು.
ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ದೇಶದ ಕಷಿ ಪದ್ಧತಿ, ರೆತರ ಬದುಕು ಸುಧಾರಣೆಗೆ ಕ್ರಮ ವಹಿಸಿದರು. ಜೈ ಜವಾನ್​ ಜೈ ಕಿಸಾನ್​ ಘೋಷಣೆ ಮೂಲಕ ಬದಲಾವಣೆಗೆ ಕ್ರಮ ವಹಿಸಿದರು. ಇಂದಿನ ಭಾರತಕ್ಕೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜೀವನ ಮತ್ತು ಸಾಧನೆಗಳು ಅಗತ್ಯವಾಗಿವೆ ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ್​ ಮಾತನಾಡಿದರು. ಡಾ. ಸಂಜೀವ ಕುಲಕರ್ಣಿ ಅವರು ಮಹಾತ್ಮಾ ಗಾಂಧೀಜಿ ಜೀವನ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಹಫೀಜ್​ ರೆಹಮಾನ್​ ಖಾದ್ರಿ, ರೆ. ಸ್ಯಾಮುವೆಲ್​ ಸಕ್ರಿ, ಮಹೇಶ್​ ಭಟ್​, ಸಂಗಮೇಶ ಬಬಲೇಶ್ವರ, ಶಾಕೀರ್​ ಸನದಿ, ಶಾಲಂ ಹುಸೇನ, ಎಸ್​.ಆರ್​. ಪಾಟೀಲ, ಸ್ವರೂಪ ಟಿ.ಕೆ., ಅಜೀಜ್​ ದೇಸಾಯಿ, ಡಾ. ಈಶ್ವರ ಉಳ್ಳಾಗಡ್ಡಿ, ಪಿ. ಶುಭಾ, ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಇದ್ದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಮಂಜುನಾಥ ಸುಳ್ಳೊಳ್ಳಿ ವಂದಿಸಿದರು.
ಪ್ರತಿಮೆಗೆ ಮಾಲಾರ್ಪಣೆ: ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರ ಎದುರಿನ ಗಾಂಧೀಜಿ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​, ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಲಾರ್ಪಣೆ ಮಾಡಿದರು. ಬಳಿಕ ಕೋರ್ಟ್​ ವೃತ್ತ ಮಾರ್ಗವಾಗಿ ಆಲೂರ ವೆಂಕಟರಾವ್​ ಭವನದವರೆಗೆ ಗಾಂಧಿ ನಡಿಗೆ ನಡೆಸಲಾಯಿತು. ಗಾಂಧೀಜಿ ಸೇರಿ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ತೊಟ್ಟಿದ್ದ ಮಕ್ಕಳು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net