

ಮಡಿಕೇರಿ: ಗಾಂಧಿ ಜಯಂತಿಯ ಅಂಗವಾಗಿ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಆವರಣದಲ್ಲಿ ನಿರ್ಮಾಣಗೊಂಡ ೯ ಅಡಿಯ ಗಾಂಧಿ ಪ್ರತಿಮೆಯನ್ನು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಅನಾವರಣ ಮಾಡಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಚೆನ್ನಾಗಿ ಓದಲು ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಆರ್ಟ್ ಇನ್ ಎಜುಕೇಶನ್ ಯೋಜನೆಯ ಅಡಿಯಲ್ಲಿ ವಿದ್ಯಾಲಯದಲ್ಲಿ ಪ್ರತಿಮೆ ನಿರ್ಮಾಣದ ಕಾರ್ಯಾಗಾರ ನಡೆಸಿಕೊಟ್ಟಿದ್ದ ಶಿಲ್ಪ ಕಲಾವಿದ ಸಂದೀಪ್‌ರನ್ನು ಸನ್ಮಾನಿಸಲಾಯಿತು. ನವೋದಯ ವಿದ್ಯಾಲಯ ಸಮಿತಿಯ ನಿವೃತ್ತ ಉಪ ನಿರ್ದೇಶಕ ರಾಘವನ್ ಮಾತನಾಡಿದರು. ಸಮಾರಂಭದಲ್ಲಿ ಸಾಹಿತಿ ಟಿ.ಪಿ.ರಮೇಶ ಮತ್ತು ವಿದ್ಯಾಲಯದ ಪಾಲಕ ಶಿಕ್ಷಕ ಪರಿಷತ್ತಿನ ಸದಸ್ಯರು ಹಾಜರಿದ್ದರು.
ವಿದ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಕೊಡವ ನೃತ್ಯ ನಡೆಯಿತು. ಪ್ರಾಂಶುಪಾಲ ಪಂಕಜಾಕ್ಷನ್, ಉಪ ಪ್ರಾಚಾರ್ಯ ಸುಧಾಮಣಿ, ಕನ್ನಡ ಶಿಕ್ಷಕ ಮಾರುತಿ ದಾಸಣ್ಣವರ್ ಇದ್ದರು.
ಸ್ವಚ್ಚತಾ ಕಾರ್ಯ: ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದಲ್ಲಿ ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಶಾಲಾ ಆವರಣದ ಒಳಗೆ ಮತ್ತು ಹೊರಗೆ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಕಳೆಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಕೆ.ನಿಡುಗಣೆ ಗ್ರಾ.ಪಂ.ಅಧ್ಯಕ್ಷೆ ಕೆ.ಡಿ.ಪಾರ್ವತಿರವರು ಸ್ವಚ್ಛತೆಯ ಮಹತ್ವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲ ಪಂಕಜಾಕ್ಷನ್ ಇದ್ದರು.