ಸೆ.29ರಿಂದ ತುಮಕೂರಿನಲ್ಲಿ ಸತ್ಯಾಗ್ರಹ: ಗಾಂಧಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಮಂಜುನಾಥ್ ಹೇಳಿಕೆ

Gandhi Sahaja Besaya Ashram Founder Press Conference Mandya
Published on

ಮಂಡ್ಯ: ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಕುಲಾಂತರಿ ಆಹಾರ ವಿರೋಧಿ ಒಕ್ಕೂಟದಿಂದ ತುಮಕೂರಿನ ದೊಡ್ಡ ಹೊಸೂರು ಗ್ರಾಮದಲ್ಲಿ ಸೆ.29 ರಿಂದ ಅ.2ರವರೆಗೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಎಚ್.ಮಂಜುನಾಥ್ ಹೇಳಿದರು.

ನಾಲ್ಕು ದಿನ ಬೆಳಗ್ಗೆ 9 ಗಂಟೆಯಿಂದ ಸತ್ಯಾಗ್ರಹ ನಡೆಸಲಾಗುವುದು. ನಮ್ಮ ಸ್ವದೇಶಿ ಕೃಷಿ ವ್ಯವಸ್ಥೆಯನ್ನು ಹಾಳುಗೆಡವಿ ಬಹುರಾಷ್ಟ್ರೀಯ ಕಂಪನಿಗಳಿಗೆ ಕುಲಾಂತರಿ ತಳಿ ಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ಭಾರತದಲ್ಲಿ ವಸಾಹತು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯವಾದುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು ಮುಂದುವರಿದರೆ ಕೃಷಿ ಜ್ಞಾನ, ಹಳ್ಳಿ, ನಮ್ಮ ದನ, ಎಮ್ಮೆ, ಆಡು, ಕುರಿ-ಕೋಳಿ, ಅನ್ನ, ಕಾಳುಗಳು, ಕೂಲಿ ಕಾರ್ಮಿಕರು, ಅಂಗಡಿ-ಮುಂಗಟ್ಟುಗಳು ಮಾಯವಾಗಿ ಅವರ ಕೃತಕ ಸರಕುಗಳು, ವಿಷಮಿಶ್ರಿತ ಆಹಾರಗಳು, ವಿಷಪೂರಿತ ಕೀಟನಾಶಕಗಳು ಮನೆ ಮನೆಗೂ ಬಂದು ನಮ್ಮ ಹಳ್ಳಿಗಳು, ಆಹಾರವನ್ನು ಹಾಳುಗೆಡವಲಿದ್ದಾರೆ. ನಮ್ಮನ್ನು, ಮಕ್ಕಳು ಹಾಗೂ ಸಮಾಜವನ್ನು ಹಿಂದೆಂದೂ ಕೇಳರಿಯದ ರೋಗಗಳಿಗೆ ತಳ್ಳುವ ಸಂಭವ ಹೆಚ್ಚು. ಇದನ್ನು ಅರಿತು ಈಗಲೇ ರೈತರು, ಜನರೆಲ್ಲರೂ ಒಗ್ಗೂಡಬೇಕಿದೆ. ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ಕೃಷಿ ಕ್ಷೇತ್ರಕ್ಕೆ ಕಾಲಿಡದಂತೆ ಬುಡಸಹಿತ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು, ಇತರೆ ಸಂಸ್ಥೆಯ ಮುಖಂಡರೊಂದಿಗೆ ಜಿಲ್ಲೆಯ ಜನರು ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜೊತೆಗೆ ತುಮಕೂರಿನ ದೊಡ್ಡಹೊಸೂರಿನಲ್ಲಿರುವ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಎಸ್.ನಾರಾಯಣ್, ಎ.ಎಲ್.ಕೆಂಪೂಗೌಡ, ಮಹೇಶ್‌ಕುಮಾರ್, ಮುದ್ದೇಗೌಡ, ಬಿ.ಎಂ.ನಂಜೇಗೌಡ, ಎನ್.ವಿ.ಶಂಕರಯ್ಯ, ಯೋಗೇಶ್, ಶಾಂತಾಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net