

ಅದಮ್ಯ ರಂಗಶಾಲೆ, ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ‘ಗಾಂಧಿ ಸದ್ಭಾವನಾ ಪ್ರಶಸ್ತಿ’ ಪ್ರದಾನ ಹಾಗೂ ‘ಭಸ್ಮಾಸುರ ಪ್ರಸಂಗ’ ಮಕ್ಕಳ ನಾಟಕ ಪ್ರದರ್ಶನ ಸಮಾರಂಭವನ್ನು ಜ.17 ರಂದು ಸಂಜೆ 5 ಗಂಟೆಗೆ ವಿಜಯನಗರದ ಮೊದಲನೆಯ ಹಂತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ರಂಗಾಶಾಲೆ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ರಂಗಕರ್ಮಿ ಚಂದ್ರು ಮಂಡ್ಯ ತಿಳಿಸಿದರು.
ಸಮಾರಂಭವನ್ನು ವಿಧಾನಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಉದ್ಘಾಟಿಸಲಿದ್ದು, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ, ಗಾಂಧಿವಾದಿ ಪ್ರೊ.ಕೆ.ಟಿ.ವೀರಪ್ಪ ಅವರು ವಿವಿಧ ಕ್ಷೇತ್ರದ ಸಾಧಕರಿಗೆ ‘ಗಾಂಧಿ ಸದ್ಭಾವನ ಪ್ರಶಸ್ತಿ’ ಪ್ರದಾನ ಮಾಡುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದಮ್ಯ ರಂಗಶಾಲೆಯ ವತಿಯಿಂದ ಪ್ರತಿವರ್ಷ ‘ಗಾಂಧಿ ಸದ್ಭಾವನ ಪ್ರಶಸ್ತಿ’ ಕೊಡ ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಎಂಟು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ವಿಜಯನಗರ ಉಪ ವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಜಿ.ಎಸ್.ಗಜೇಂದ್ರ ಪ್ರಸಾದ್, ನಾಗಮಂಗಲದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮ್, ಪತ್ರಕರ್ತ ಮಹೇಶ್ ಎಂ.ಭಗೀರಥ, ಪಿರಿಯಾಪಟ್ಟಣದ ಕಲ್ಪವೃಕ್ಷ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಪ್ರಶಾಂತ್‌ಗೌಡ, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಸೋಮಣ್ಣ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಶ್ರೀ ವಾಸವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ವಾಸವಾಂಬ, ಮಂಡ್ಯದ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಪ್ರಾಂಶುಪಾಲೆ, ಕವಯತ್ರಿ ಎಚ್.ಆರ್.ಕನ್ನಿಕಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅದಮ್ಯ ರಂಗಶಾಲೆಯ ವಾರಾಂತ್ಯ ರಂಗ ತರಬೇತಿ ಶಿಬಿರದ ಮಕ್ಕಳು ಅಭಿನಯಿಸುವ ಲೋಕನಾಥ ಸೋಗುಂ ಅವರ ಸಂಗೀತ ಮತ್ತು ನಿರ್ದೇಶನವಿರುವ ‘ಭಸ್ಮಾಸುರ ಪ್ರಸಂಗ’ ಮಕ್ಕಳ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.