

ಮೈಸೂರು: ಅದಮ್ಯ ರಂಗಶಾಲೆ ವತಿಯಿಂದ ಫೆ.4ರಂದು ಸಂಜೆ 5.30ಕ್ಕೆ ನಗರದ ಜಯಲಕ್ಷ್ಮಿಪುರಂನ ಶ್ರೀ ವಿವೇಕಾನಂದ ಪದವಿಪೂರ್ವ ಕಾಲೇಜು ಆವರಣದ ಕುವೆಂಪು ರಂಗಮಂದಿರದಲ್ಲಿ ‘ಗಾಂಧಿ ಸದ್ಭಾವನ ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ನಾಟಕ ಪ್ರದರ್ಶನ’ ಸಮಾರಂಭ ನಡೆಯಲಿದೆ.
ಸಮಾರಂಭವನ್ನು ಕವಯತ್ರಿ ಡಾ.ಲತಾ ರಾಜಶೇಖರ್ ಉದ್ಘಾಟಿಸಿದ ಬಳಿಕ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಮ.ಗು. ಸದಾನಂದಯ್ಯ ಅಧ್ಯಕ್ಷತೆ ವಹಿಸುವರು. ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಪ್ರಶಸ್ತಿ ಪುರಸ್ಕೃತರ ಕುರಿತು ಅಭಿನಂದನಾ ನುಡಿಗಳನ್ನಾಡುವರು. ಮುಖ್ಯ ಅತಿಥಿಯಾಗಿ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎನ್.ಸಂತೋಷ್ ಕುಮಾರ್ ಪಾಲ್ಗೊಳ್ಳುವರು ಎಂದು ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಗಾಂಧಿ ಸದ್ಭಾವನ ಪ್ರಶಸ್ತಿ’ ಪುರಸ್ಕೃತರು: ಸಾಹಿತಿ ಜಿ.ಎಲ್.ತ್ರಿಪುರಾಂತಕ (ಅಂಕಣ ಸಾಹಿತ್ಯ), ಮಂಡ್ಯದ ಅನಿಕೇತನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ. ರಾಮಲಿಂಗಯ್ಯ (ಶಿಕ್ಷಣ ಕ್ಷೇತ್ರ), ಮೈಸೂರಿನ ವಿಜಯನಗರದ ಪುಣ್ಯಕೋಟಿ ಸೇವಾ ಟ್ರಸ್ಟ್ ಅಧ್ಯಕ್ಷ ಹನುಮಂತೇಶ್ (ಸಮಾಜಸೇವಾ ಕ್ಷೇತ್ರ) ಅವರು ‘ಗಾಂಧಿ ಸದ್ಭಾವನ ಪ್ರಶಸ್ತಿ’ ಸ್ವೀಕರಿಸುವರು.
ಇದೇ ಸಂದರ್ಭದಲ್ಲಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉತ್ತಮ ಸ್ವಯಂ ಸೇವಕ ವಿದ್ಯಾರ್ಥಿಗಳಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಎಚ್.ಎಸ್. ಪ್ರನುಶ, ರಾಮನಗರ ಜಿಲ್ಲೆಯ ಆರ್.ಕಿರಣ್, ಮಂಡ್ಯ ಜಿಲ್ಲೆಯ ಸಂತೇಬಾಚಳ್ಳಿಯ ಎಸ್.ಎಂ. ಅನನ್ಯ ಅವರಿಗೆ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನದ ಬಳಿಕ ಅದಮ್ಯ ರಂಗಶಾಲೆಯ ಮಕ್ಕಳಿಂದ ಪಂಚತಂತ್ರ ಕಥೆಯಾಧಾರಿತ ‘ರಂಗಣ್ಣನ ರಂಪಾಟ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.