

ಮಂಡ್ಯ: ಎಂದಿಗೂ ಬೇರೊಬ್ಬರನ್ನು ಟೀಕೆ ಮಾಡಿದ ಮಹಾತ್ಮ ಗಾಂಧೀಜಿ ಅವರ ಆದರ್ಶವೇ ನಮಗೆ ಮಾದರಿಯಾಗಿದೆ. ಇಡೀ ದೇಶವನ್ನೇ ಒಂದು ಕುಟುಂಬವಾಗಿ ನೋಡಿದವರು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಸ್ಮರಿಸಿದರು.
ನಗರದ ಗಾಂಧಿ ಭವನದಲ್ಲಿ ಚಿತ್ರಕೂಟ ವತಿಯಿಂದ ಆಯೋಜಿಸಿದ್ದ ‘ಮತ್ತೆ ಮತ್ತೆ ಗಾಂಧಿ’ ಮಹಾತ್ಮನ ನೆನಪಲ್ಲಿ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸತ್ಯ ಮತ್ತು ಅಹಿಂಸೆ ಜೋಡಿಸಿದ ಮಹಾತ್ಮ ಗಾಂಧೀಜಿ ಅವರನ್ನ ದೇವರು ನೆನೆಸಿಕೊಳ್ಳುವ ಹಾಗೆ ಪ್ರತಿಯೊಬ್ಬ ಭಾರತೀಯನು ನೆನೆಯಬೇಕು. ಪಿತಾಮಹರಾಗಿ, ಸತ್ಯವಂತರಾಗಿ ಮಹಾತ್ಮ ಗಾಂಧಿ ಬದುಕಿದ್ದರು. ಅವರೊಬ್ಬ ಮಹಾನ್ ಚೇತನವಾಗಿದ್ದು, ಪ್ರತಿಯೊಬ್ಬರನ್ನೂ ಪ್ರೀತಿಸುತ್ತಿದ್ದರು. ಬ್ರಿಟಿಷರ ವಿರುದ್ಧ 35 ವರ್ಷಗಳ ಕಾಲ ಹೋರಾಟ ಮಾಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಯಾರಿಂದಲೂ ಏನೂ ಬಯಸದ ಗಾಂಧಿ ನೆಲದ ಒಡಲನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರು ಭಾಷಣಗಾರರಲ್ಲ, ಆದರೂ ಲಕ್ಷಾಂತರ ಜನರು ಅವರ ಸತ್ಯ ಹಾಗೂ ಸರಳತೆಗೆ ಮಾರುಹೋಗಿದ್ದರು. ಅವರ ದರ್ಶನ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಇದಕ್ಕೆ ಕಾರಣವಿಷ್ಟೇ, ಅವರು ಪಾಲಿಸಿದ ಸತ್ಯ ಮತ್ತು ಅಹಿಂಸೆ. ಇದನ್ನು ದೊಡ್ಡ ಅಸ್ತ್ರವನ್ನಾಗಿ ಬಳಸಿಕೊಂಡು ಹೋರಾಟ ನಡೆಸಿದರು. ಗಾಂಧೀಜಿ ಅವರ ವಿಚಾರ ದರ್ಶನದ ಮೂಲಕ ಇಂದು ಎಂದೆಂದಿಗೂ ಬದುಕಿರುತ್ತಾರೆ. ಎಲ್ಲಿವರೆವಿಗೂ ಸತ್ಯ ಮತ್ತು ಅಹಿಂಸೆ ಭೂಮಿಯಲ್ಲಿ ಉಳಿದಿರುತ್ತದೋ ಅಲ್ಲಿಯವರೆಗೂ ಗಾಂಧಿ ಇರುತ್ತಾರೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಗಾಂಧೀಜಿ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾ ಅಗೌರವವಾಗಿ ಕಾಣುತ್ತಿದ್ದಾರೆ. ಯುವಕರಲ್ಲಿ ತಪ್ಪು ಕಲ್ಪನೆ ಬಿತ್ತುವ ಉದ್ದೇಶದಿಂದಲೇ ಈ ಕ್ರೌರ್ಯ ಗಾಂಧೀಜಿ ಮೇಲೆ ನಡೆಸಲಾಗುತ್ತಿದೆ. ಮಾಧ್ಯಮ ಉತ್ತಮ ಮಟ್ಟಕ್ಕೆ ಸಾಗುತ್ತಿದ್ದರೆ, ಸಾಮಾಜಿಕ ಜಾಲತಾಣಗಳು ಹಳಿ ತಪ್ಪಿರುವಂತೆ ಕಾಣುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಮುಖ್ಯವಾಗಬೇಕು. ಮಹಾನ್ ವ್ಯಕ್ತಿಗಳಿಗೆ ಗೌರವ ಸಿಗುವಂತೆ ನೋಡಿಕೊಳ್ಳಬೇಕು. ಗಾಂಧಿಯನ್ನು ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಚಿಂತಕ ಎಚ್.ಕೆ.ವಿವೇಕಾನಂದ ಅವರು ಉಪನ್ಯಾಸ ನೀಡಿದರು. ರಂಗಾಯಣದ ಮಾಜಿ ನಿರ್ದೇಶಕ ಬಿ.ಸಿ.ಬಸವಲಿಂಗಯ್ಯ, ಅಂಕಣಕಾರ ಬಿ.ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ, ಈದಿನ.ಕಾಮ್ ವಿಭಾಗ ಮುಖ್ಯಸ್ಥ ಬಿ.ಸಿ.ಬಸವರಾಜು, ಸಹ ಪ್ರಾಧ್ಯಾಪಕಿ ಶಿಲ್ಪಶ್ರೀ ಹರವು ಇದ್ದರು.
ಇದೇ ಸಂದರ್ಭದಲ್ಲಿ ಮಹಾತ್ಮಗಾಂಧಿ ಅವರ ಕುರಿತಂತೆ ಕವಿ ಕೆ.ಪಿ.ಮೃತ್ಯುಂಜಯ ಅವರು ಬಾಪು ಮತ್ತು ಗಾಂಧಿ ಈಗ ಎಂಬ ಶೀರ್ಷಿಕೆಯನ್ನು ಓದಿದರು. ಮಲ್ಲಿಕಾರ್ಜುನ ಮಹಾಮನೆ ಸೇರಿದಂತೆ ಇತರೆ ಕವಿಗಳು ಕವಿತೆ ವಾಚನ ಮಾಡಿದರು. ಕೊಪ್ಪ ಸೌಹಾರ್ದ ಸಂಘಕ್ಕೆ ಚಿತ್ರಕೂಟ ಪುರಸ್ಕಾರ ನೀಡಲಾಯಿತು.