

ಕಡೂರು: ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಗಾಂಧಿ ಹಾಗೂ ಜವಾಹರ್ಲಾಲ್ ನೆಹರು ಅವರದಾಗಿತ್ತು. ಬಿಜೆಪಿವರಿಗೆ ಯಾವುದೇ ನಾಯಕರ ಮಾದರಿ ಇಲ್ಲ. ಅದಕ್ಕಾಗಿ ಕಾಂಗ್ರೆಸ್ ನಾಯಕರ ಕಾರ್ಯಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಗ್ರಾಮ ಸ್ವರಾಜ್ಯದ ಬಗ್ಗೆ ಮಾತನಾಡುವ ಹಕ್ಕು ಬಿಜೆಪಿಗಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹರಿಹಾಯ್ದರು.
ಪ್ರತಿ ಗ್ರಾಮ ಅಭಿವೃದ್ಧಿ ಹೊಂದಬೇಕು ಎಂಬುದು ಗಾಂಧೀ ಕನಸಾಗಿತ್ತು. ಗ್ರಾಮಗಳು ಪ್ರಬಲವಾಗಬೇಕು ಎಂಬ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರುವ ಕಾರ್ಯವನ್ನು ರಾಜೀವ್ ಗಾಂಧಿ ವಿಧಿ 73-74ರ ತಿದ್ದುಪಡಿ ಕೈಗೆತ್ತಿಕೊಂಡಿದ್ದರು. ಆಗ ಬಿಜೆಪಿ ನಾಯಕರು ರಾಜ್ಯ ಸಭೆಯಲ್ಲಿ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ನಂತರ ಪಿ.ವಿ.ನರಸಿಂಹ್ ರಾವ್ ಪ್ರಧಾನಿಯಾಗಿದ್ದ ಸಂದರ್ಭ ಮಸೂದೆ ಪಾಸ್ ಆಯಿತು. ಹಿಂದುಳಿದ ವರ್ಗಕ್ಕೆ, ಮಹಿಳೆಯರಿಗೆ, ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ. 18 ವರ್ಷ ತುಂಬಿದ ಯುವಕರಿಗೆ ಮತದಾನದ ಹಕ್ಕು ನೀಡಿದರು. 29 ಇಲಾಖೆಗಳನ್ನು ಒಂದೇ ಇಲಾಖೆಗೆ ಸೇರಿಸಿದ್ದು ಮನಮೋಹನ್ ಸಿಂಗ್. ಆಗ ನರೇಗಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ. ಇದಕ್ಕೆ ಸಿದ್ದರಾಮಯ್ಯ ಕೆಲ ಸುಧಾರಣೆಗಳನ್ನು ತಂದರು. ಈ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಮತಕೇಳುವ ಹಕ್ಕು ಕಾಂಗ್ರೆಸ್ಗಿದೆ. ಪಕ್ಷದ ಸಿದ್ಧಾಂತವನ್ನು ಬೆಂಬಲಿಸುವ ಅಭ್ಯರ್ಥಿಗಳಿಗೆ ಮತ ನೀಡಬೇಕಿದೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾಯ್ದೆ ಹೊಸದೇನಲ್ಲ. 1964ರಲ್ಲಿಯೇ ಜಾರಿಗೆ ಬಂದಿತ್ತು. ಸ್ವಲ್ಪ ಸುಧಾರಣೆ ಮಾಡಲಾಗಿದೆ. ಕಾಂಗ್ರೆಸ್ ಈ ಕಾಯ್ದೆಯ ವಿರೋಧಿ ಅಲ್ಲ. ಗೋಹತ್ಯೆ ವಿಷಯವನ್ನು ರಾಜಕಾರಣದ ಅಸ್ತ್ರವಾಗಿ ಬಳಸಬಾರದು. ಗೋವಿನ ಬಗ್ಗೆ ಪ್ರತಿಯೊಬ್ಬರಲ್ಲೂ ಪೂಜ್ಯಭಾವನೆ ಇದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಜನರ ಬದುಕು ಕಟ್ಟಿಕೊಳ್ಳಲು ಹಲವು ಜನೋಪಯೋಗಿ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಲಾಲ್ಬಹಾದೂರ್ ಶಾಸ್ತ್ರಿ ನಂತರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವುದು ಪ್ರಧಾನಿ ಮನಮೋಹನ್ ಸಿಂಗ್. ಈಗ ಶಿಕ್ಷಣ, ರಾಜಕಾರಣ, ಧಾರ್ವಿುಕತೆ ಎಲ್ಲವೂ ವ್ಯಾಪಾರೀಕರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದತ್ತ ಕಾಂಗ್ರೆಸ್ ಸೇರ್ಪಡೆ ಚರ್ಚೆಯಾಗಿಲ್ಲ: ಜೆಡಿಎಸ್ ಮಾಜಿ ಶಾಸಕ ವೈಎಸ್ವಿ ದತ್ತ ಅವರು ಕಾಂಗ್ರೆಸ್ ಸೇರುವ ಬಗ್ಗೆ ರಾಜ್ಯ ಕಾಂಗ್ರೆಸ್ ಮಟ್ಟದಲ್ಲಿ ಯಾವುದೇ ಚಿಂತನೆ ನಡೆಸಿಲ್ಲ. ಹಿರಿಯ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ನಡುವೆಯೂ ಈ ವಿಷಯದ ಬಗ್ಗೆ ಎಲ್ಲಿಯೂ ರ್ಚಚಿಸಿಲ್ಲ ಎಂದು ಬಿ.ಎಲ್.ಶಂಕರ್ ಸ್ಪಷ್ಟಪಡಿಸಿದರು. ವೈಯಕ್ತಿಕವಾಗಿ ದತ್ತ ಮತ್ತು ನಾನು ಬಹುಕಾಲದ ಮಿತ್ರರು. ಯಾರೇ ಕಾಂಗ್ರೆಸ್ಗೆ ಬರುವುದಾದರೂ ಸಾಮಾನ್ಯ ಕಾರ್ಯಕರ್ತರಾಗಿ ಸೇರಬಹುದು. ಯಾವುದೇ ಹುದ್ದೆ ಅಪೇಕ್ಷೆಪಟ್ಟು ಬರುವವರೆಗೆ ಇಲ್ಲಿ ಯಾವುದೇ ಸ್ಥಾನಮಾನ ದೊರಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್, ಮುಖಂಡರಾದ ಎ.ಎನ್.ಮಹೇಶ್, ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್, ರೇವತಿ ನಾಗರಾಜ್, ಜಿಮ್ ಶ್ರೀನಿವಾಸ್, ಚಂದ್ರಪ್ಪ, ಕೆ.ಎನ್.ವಿನಾಯಕ್, ಇಕ್ಬಾಲ್ ಇತರರಿದ್ದರು.