

ಹುನಗುಂದ: ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಪುಟಗಳಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನ ಜಾಗತಿಕ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ ಏಕೈಕ ಅಧಿವೇಶನ ಇದಾಗಿದೆ ಎಂದು ಪ್ರಾಧ್ಯಾಪಕ ಮಂಜುನಾಥ ಬೆನ್ನೂರ ಹೇಳಿದರು.
ಪಟ್ಟಣದ ವಿಎಂಕೆಎಸ್‌ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಕಾಲೇಜು, ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ನಿಡಗುಂದಿ ತಾಲೂಕಿನ ಬೇನಾಳದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಷನ್ ಸಹಯೋಗದಲ್ಲಿ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸ್ಮರಣಾರ್ಥ ಆಯೋಜಿಸಿದ ಗಾಂಧಿ ಅರಿವು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ನೇತಾಜಿ ಗಾಂಧಿ ಅಮೋಘ ನಾಯಕ ಮಾತನಾಡಿ, ಮಹಾತ್ಮ ಗಾಂಧಿ ತಮ್ಮ ತತ್ವ ಸಿದ್ಧಾಂತಗಳಿಂದ, ಪ್ರತಿಪಾದಿಸಿದ ಮೌಲ್ಯಗಳಿಂದ ಭಾರತವನ್ನಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಪ್ರಭಾವಿ ನೇತಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಅಮೆರಿಕದ ಲೂಥರ್ ಡಾ. ಮಾರ್ಟಿನ್ ಜ್ಯೂನಿಯರ್, ಬರ್ಮಾದ ಅಂಗ್‌ಸಾನ್ ಸೂಕಿ, ಇಸ್ರೇಲಿನ ಬೆನ್ನ ಗುರಿನ್, ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್, ನೋಬೆಲ್ ಪ್ರಶಸ್ತಿ ಪುರಸ್ಕೃತ ರೋಮಾರೋಲಾ ಸೇರಿ ಪ್ರಪಂಚದ ಅಸಂಖ್ಯಾತ ಜನರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಪ್ರಾಚಾರ್ಯೆ ಶಶಿಕಲಾ ಕೆ. ಮಠ ಮಾತನಾಡಿ, ಗಾಂಧೀಜಿ ಅವರು ಜನ್ಮತಃ ಹೋರಾಟಗಾರರು. ಸತ್ಯ, ಶಾಂತಿ, ಅಹಿಂಸೆ ಮೂಲಕ ಇಂಗ್ಲಿಷರ ಕಪಿಮುಷ್ಟಿಯಿಂದ ದೇಶ ಮುಕ್ತವಾಗಿಸಲು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಗಾಂಧೀಜಿ ಆದರ್ಶಗಳನ್ನು ಮೈಗೂಡಿಸಿಕೊಳಬೇಕು ಎಂದರು.
ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪರಶುರಾಮ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ರೀಡಾ ನಿರ್ದೇಶಕ ಎಸ್.ಬಿ. ಚಳಗೇರಿ ಮತ್ತು ಡಾ. ಎಸ್. ಆರ್. ನಾಗಣ್ಣವರ ಇದ್ದರು.
ಅಭಿಷೇಕ ಮುಡಪಲದಿನ್ನಿ ಮತ್ತು ಸಂಗಡಿಗರು ವಚನ ಪ್ರಾರ್ಥಿಸಿದರು. ಎಲ್.ಎನ್. ಕುಲಕರ್ಣಿ ಸ್ವಾಗತಿಸಿದರು. ಭಾಗ್ಯಶ್ರೀ ಗೋಲಪ್ಪನವರ ಮತ್ತು ಮಾಳಪ್ಪ ನಿರೂಪಿಸಿದರು. ಪ್ರೊ.ಆನಂದ ತೇಲಿ ವಂದಿಸಿದರು.