

ಉಡುಪಿ: ಪ್ರಸ್ತುತ ಕಾಲಘಟ್ಟದಲ್ಲಿ ಆಸ್ಪತ್ರೆ ಮುನ್ನಡೆಸುವುದು ಸವಾಲಿನ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಅವಲೋಕಿಸಿದರೆ ಗಾಂಧಿ ಆಸ್ಪತ್ರೆ ಯಶಸ್ವಿ ವೈದ್ಯಕೀಯ ಸೇವೆ ನೀಡುತ್ತಿದೆ ಎಂದು ಯನೆಪೋಯ ವಿಶ್ವ ವಿದ್ಯಾ ನಿಲಯದ ಪ್ರೊ. ಚಾನ್ಸೆಲರ್ ಡಾ. ಎಂ. ವಿಜಯಕುಮಾರ್ ಹೇಳಿದರು.
ಆತ್ರಾಡಿ ಒಂತಿಬೇಟ್ಟುವಿನ ಮದಗದಲ್ಲಿ ಗಾಂಧಿ ಆಸ್ಪತ್ರೆಗೆ ಮೂವತ್ತು ವರ್ಷ ಸಂಭ್ರಮಾಚರಣೆ ಉದ್ಘಾಟಿಸಿ ಮಾತನಾಡಿದರು. ವೈದ್ಯರು ದೇವರಲ್ಲ. ಆದರೆ ಪ್ರತಿಯೊಬ್ಬ ವೈದ್ಯರೂ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸುತ್ತಾರೆ. ಚಿಕಿತ್ಸೆ ಫಲಿತಾಂಶವನ್ನು ಯಥಾಸ್ಥಿತಿ ಸ್ವೀಕರಿಸುವ ಮನೋಭಾವ ಜನರು ಬೆಳೆಸಿಕೊಳ್ಳಬೇಕು ಎಂದರು.
ಮಾಹೆಯ ಪ್ರೊ. ಚಾನ್ಸಿಲರ್ ಡಾ. ಎಚ್. ಎಸ್. ಬಲ್ಲಾಳ್, ಉದ್ಯಮಿ ಡಾ. ಜಿ.ಶಂಕರ್, ಐ ಎಂ ಎ ಉಡುಪಿ-ಕರಾವಳಿಯ ಅಧ್ಯಕ್ಷ ಡಾ. ಸುರೇಶ್ ಶೆಣೈ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಲಕ್ಷಿ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಜನಿಸಿದ ಸಾಧಕ ಮಕ್ಕಳು ಹಾಗೂ ಅವಳಿ ಮಕ್ಕಳನ್ನು ಸನ್ಮಾನಿಸಲಾಯಿತು. ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರೀಶ್ಚಂದ್ರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ದೆಹಲಿಯ ಪ್ರಸಿದ್ಧಮಿರಾಕಲ್ ಆನ್ ವೀಲ್ ಎಂಬ ಸಂಸ್ಥೆಯಿAದ ವೀಲ್ ಚೇರ್ ನೃತ್ಯ ಪ್ರದರ್ಶನ ನಡೆಯಿತು.
ವೈದ್ಯಲೋಕದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿದ್ದು, ಅವುಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಗಾಂಧಿ ಆಸ್ಪತ್ರೆ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಜೊತೆಗೆ ಸ್ವಚ್ಛತಾ ಸಿಬ್ಬಂದಿಗೆ ನೆರವು, ಸ್ವಚ್ಛತಾ ಕಾರ್ಯ ಮೊದಲಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ. ಡಾ. ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ