

ಮಂಜುನಾಥ ಎಸ್. ಅಂಗಡಿ ಧಾರವಾಡ
ಗ್ರಾಮ ಪಂಚಾಯಿತಿಗಳು ಇಂದು ಆಡಳಿತಾತ್ಮಕ ಹಾಗೂ ಅನುದಾನದಲ್ಲೂ ಬಲಿಷ್ಠವಾಗಿವೆ. ಗ್ರಾ.ಪಂ.ಗಳ ಕಾರ್ಯವೈಖರಿಯನ್ನು ಗುರುತಿಸಿ ಪ್ರೇರೇಪಿಸುವ ಉದ್ದೇಶದಿಂದ ನೀಡಲಾಗುವ `ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ ಜಿಲ್ಲೆಯ 7 ಗ್ರಾ.ಪಂ.ಗಳು ಭಾಜನವಾಗಿವೆ. ತಾಲೂಕಿನ ಕೊಟಬಾಗಿಯ ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ.
ಕ್ಷೇತ್ರ ಅಧ್ಯಯನ: ಗ್ರಾಮಗಳಲ್ಲಿ ನೈರ್ಮಲ್ಯಕ್ಕಾಗಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಸ್ವಚ್ಛತಾ ವಾಹಿನಿಯಲ್ಲಿ ಕಸ ಸಂಗ್ರಹಿಸಿ ಹಸಿ ಕಸ- ಒಣ ಕಸವನ್ನು ಬೇರ್ಪಡಿಸಿ ಮರುಬಳಸುವ ಕಾರ್ಯ ಮಾದರಿಯಾಗಿದೆ. ಇದನ್ನು ವೀಕ್ಷಿಸಲು ಬೇರೆ ಪಂಚಾಯಿತಿಗಳ ಸದಸ್ಯರು ಕ್ಷೇತ್ರ ಅಧ್ಯಯನಕ್ಕೆ ಬರುತ್ತಿರುವುದು ವಿಶೇಷ. ಬಚ್ಚಲು ನೀರು ರಸ್ತೆಗೆ ಬಂದು ಗಲೀಜಾಗುವುದನ್ನು ತಡೆಯಲು ಬಹುತೇಕ ಮನೆಗಳಿಗೆ ಇಂಗುಗು0ಡಿ ನಿರ್ಮಿಸಲಾಗಿದೆ.
3 ಅಮೃತ ಸರೋವರ: ನರೇಗಾ ಅಡಿ ೩ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಕೆರೆಗಳ ಹೂಳೆತ್ತಿ ಮಳೆನೀರು ಸಂಗ್ರಹವಾಗುವAತೆ ಸುತ್ತಲೂ ಕಲ್ಲಿನ ದಂಡೆ ನಿರ್ಮಿಸಲಾಗಿದೆ. ದಂಡೆಯ ಮೇಲೆ ಸಸಿ ನೆಡಲಾಗಿದ್ದು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ‍್ಯದ ೭೫ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ಕೆರೆಗಳ ದಂಡೆಯ ಮೇಲೆ ಧ್ವಜಾರೋಹಣ ಮಾಡಿದ್ದು ವಿಶೇಷ.
ಡಿಜಿಟಲ್ ಲೈಬ್ರರಿ: ಮಕ್ಕಳು ಓದಲು ಅನುಕೂಲವಾಗುವಂಥ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಶಾಲಾ ಮಕ್ಕಳಲ್ಲಿ ಗ್ರಂಥಾಲಯ ಓದಿನ ಹವ್ಯಾಸ ಬೆಳೆಸಲಾಗಿದೆ. ಮಕ್ಕಳಿಗೆ ನಿಯತಕಾಲಿಕೆ, ದಿನಪತ್ರಿಕೆಗಳು ಮತ್ತು ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆ ಓದುವವರಿಗೆ ಪುಸ್ತಕಗಳ ವ್ಯವಸ್ಥೆ ಇದೆ. ಶಾಲಾ ಪಠ್ಯಾಧಾರಿತ ಟ್ಯಾಬ್ ಮತ್ತು ವಿಡಿಯೋ ಪಾಠಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ.
ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಾರೆ. ಸರ್ವ ಸದಸ್ಯರ ಸಹಕಾರ ಮತ್ತು ಊರಿನ ಜನರ ಪ್ರೋತ್ಸಾಹದಿಂದ ಗ್ರಾಮಗಳ ಅಭಿವೃದ್ಧಿಯಾಗಿದೆ. ದೂರದ ಊರುಗಳ ಸದಸ್ಯರು ನೋಡಲು ಬಂದಿರುವುದು ನಮ್ಮ ಹೆಮ್ಮೆ.- ಶಕುಂತಲಾ ಭಂಗಿ, ಕೊಟಬಾಗಿ ಗ್ರಾ.ಪಂ. ಅಧ್ಯಕ್ಷೆ
ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಸಹಕಾರ, ಗ್ರಾಮಸ್ಥರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ರಾಜ್ಯ ಮಟ್ಟದ ಪುರಸ್ಕಾರ ಜವಾಬ್ದಾರಿಯನ್ನು ಹೆಚ್ಚಿಸಿದೆ.- ಸುನಂದಾ ಐ. ಕಮತಿ, ಕೊಟಬಾಗಿ ಪಿಡಿಒ