

ಗುಳೇದಗುಡ್ಡ: ತಾಲೂಕಿನಲ್ಲಿ ಉತ್ತಮ ಡಿಜಿಟಲ್ ಲೈಬ್ರರಿ, ಮೂಸೌಕರ್ಯ ಒಳಗೊಂಡ ಪಂಚಾಯಿತಿಗಳಲ್ಲಿ ಒಂದಾದ ಕೋಟೆಕಲ್ ಗ್ರಾಮ ಪಂಚಾಯಿತಿಗೆ 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಈ ಮೂಲಕ ನಾಲ್ಕನೇ ಬಾರಿಗೆ ಪ್ರಶಸ್ತಿ ಮೂಡಿಗೇರಿಸಿಕೊಂಡಿದೆ.
ಪ್ರತಿ ವರ್ಷ ಪಂಚಾಯಿತಿಗಳು ಮಾಡಿರುವ ಅಭಿವೃದ್ಧಿ ಕೆಲಸಗಳು ಸೇರಿ ಇನ್ನಿತರ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಆಯುಕ್ತಾಲಯದಿಂದ ನೀಡುವ ಗಾಂಧಿ ಗ್ರಾಮ ಪುರಸ್ಕಾರವು 5 ಲಕ್ಷ ರೂ. ಮೊತ್ತದ ಪ್ರಶಸ್ತಿ ಹೊಂದಿದೆ. ನರೇಗಾ, ಗ್ರಾಮಗಳಲ್ಲಿ ಮೂಲಸೌಕರ್ಯ, ಶಿಕ್ಷಣ, ಜೀವನ ಗುಣಮಟ್ಟ, ಹಣಕಾಸಿನ ವಿಷಯಗಳು, ಉತ್ತಮ ಆಡಳಿತ, ಗ್ರಾಪಂ ಸೇವೆಗಳ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತದೆ.
ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ಖುಷಿಯಾಗಿದೆ. ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಗೆ ಉತ್ತಮ ಆಡಳಿತ ನೀಡುತ್ತೇವೆ ಎಂದು ಕೋಟೆಕಲ್ ಗ್ರಾಪಂ ಅಧ್ಯಕ್ಷೆ ಮಹಾಲಿಂಗವ್ವ ಎಮ್ಮಿ ಹೇಳಿದರು.