ಬಟ್ಟೂರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

AWARD
Published on

ಲಕ್ಷ್ಮೇಶ್ವರ: ಕರವಸೂಲಿ, ಎಸ್‌ಸ್ಸಿ/ಎಸ್‌ಟಿ, ಅಂಗವಿಕಲ ಅನುದಾನ ಸಂಪೂರ್ಣ ಸದ್ಬಳಕೆ, ಮಕ್ಕಳ ಸ್ನೇಹಿ, ಜನಸ್ನೇಹಿ, ನರೇಗಾ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

ಗಾಂಧಿ ಜಯಂತಿ ಅಂಗವಾಗಿ ಅ.2 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ. ಈ ಪುರಸ್ಕಾರ 5 ಲಕ್ಷ ರೂ, ಪಾರಿತೋಷಕ ಮತ್ತು ಅಬಿನಂಧನಾ ಪತ್ರ ಹೊಂದಿರುತ್ತದೆ.

ಕುಂದ್ರಳ್ಳಿ ತಾಂಡಾ, ಕುಂದ್ರಳ್ಳಿ, ಶೆಟ್ಟಿಕೇರಿ ಗ್ರಾಮ ಸೇರಿ ಗ್ರಾಪಂ 14 ಸದಸ್ಯರನ್ನು ಒಳಗೊಂಡಿದೆ. 1467 ಕುಟುಂಬಗಳು ಮತ್ತು 5840 ಜನಸಂಖ್ಯೆ ಹೊಂದಿದ್ದು ಬಹುತೇಕ ಕುಟುಂಬಗಳು ಶೌಚಗೃಹ ಹೊಂದಿವೆ. ನರೇಗಾ ಯೋಜನೆಯಡಿ ಶೇ. 100 ರಷ್ಟು ಪ್ರಗತಿ ಸಾಧಿಸಿದೆ. ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸಲು ಜನಜಾಗೃತಿ ಮೂಡಿಸಲು ಗ್ರಾಪಂ ಯಶಸ್ವಿಯಾಗಿದೆ. ಕಸ ವಿಲೇವಾರಿ ಘಟಕ ನಿರ್ಮಿಸಿದ್ದು ಹಸಿ ಕಸ ಮತ್ತು ಒಣ ಕಸ ಸಂಗ್ರಹ, ಬೇರ್ಪಡಿಸುವಿಕೆಗೆ, ಸಮರ್ಪಕ ಆನ್‌ಲೈನ್ ಸೇವೆ ನೀಡಲಾಗಿದೆ.

ಅಮೃತ ಗ್ರಾಪಂಗೆ ಆಯ್ಕೆ: ಸುವರ್ಣಮಹೋತ್ಸವ ಅಂಗವಾಗಿ ಬಟ್ಟೂರು ಅಮೃತ ಪಂಚಾಯತಿಗೆ ಆಯ್ಕೆಯಾಗಿದ್ದರಿಂದ 25 ಲಕ್ಷ ರೂ. ವಿಶೇಷ ಅನುದಾನದಲ್ಲಿ ಅಂಗನವಾಡಿ, ಶಾಲೆಗಳಲ್ಲಿ ಶೌಚಗೃಹ, ಶುದ್ಧ ಕುಡಿಯುವ ನೀರು, ಪಾಠೋಪಕರಣ, ಪೀಠೋಪಕರಣ ಸೇರಿ ಅಗತ್ಯ ಮತ್ತು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿಯೇ ವಿಶೇಷ ಎನ್ನುವಂತೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 1.5 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಇಂಟರ‌್ಯಾಕ್ಟಿವ್ ಬೋರ್ಡ್, ಪಿಂಕ್ ಶೌಚಗೃಹ, ವಾಲಿಬಾಲ್, ಕಬಡ್ಡಿ, ಖೋಖೋ ಗ್ರೌಂಡ್ ನಿರ್ಮಿಸಲಾಗಿದೆ. ಡಿಜಿಟಲ್ ಗ್ರಂಥಾಲಯ, ಸ್ವ ಸಹಾಯ ಸಂಘಕ್ಕೆ ಶೆಡ್ ನಿರ್ಮಾಣ ಗ್ರಾಪಂನ ವಿಶೇಷ ಕಾರ್ಯಗಳಾಗಿವೆ.

ನರೇಗಾ ಯೋಜನೆ, 15ನೇ ಹಣಕಾಸು ಮತ್ತು ಅಮೃತ ಪಂಚಾಯಿತಿ ಅನುದಾನದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳ ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿರುವುದು ಖುಷಿ ತಂದಿದೆ. ಗ್ರಾಪಂ ಸದಸ್ಯರ ಕಳಕಳಿ, ಜನರ, ಅಧಿಕಾರಿಗಳ ಸಹಕಾರದಿಂದ ಕೈಗೊಂಡ ಅಭಿವೃದ್ಧಿ ಕೆಲಸಗಳೇ ಪುರಸ್ಕಾರಕ್ಕೆ ಕಾರಣ. ಈ ಪ್ರಶಸ್ತಿ ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ.ಜಗದೀಶಗೌಡ ಪಾಟೀಲ ಗ್ರಾಪಂ ಅಧ್ಯಕ್ಷ, ಎಂ.ಆರ್. ಮಾದರ, ಪಿಡಿಒ

ಸರ್ಕಾರದ ಅನುದಾನ ಸದ್ಬಳಕೆ ಮತ್ತು ಉದ್ದೇಶ ಈಡೇರಿದೆ. ಎಲ್ಲ ಪಂಚಾಯಿತಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸುವುದು ಈ ಪ್ರಶಸ್ತಿ ಉದ್ದೇಶವಾಗಿದೆ. ಈ ಪುರಸ್ಕಾರ ಇತರೆ ಗ್ರಾಪಂಗಳಿಗೆ ಪ್ರೇರಣೆ.ಕೃಷ್ಣಪ್ಪ ಧರ್ಮರ , ತಾಪಂ ಇಒ ಲಕ್ಷ್ಮೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net