ದೇಶಕ್ಕಾಗಿ ತುಂಡುಡುಗೆಯುಟ್ಟ ಸಂತ

C MLC Cleaning
Published on

ಕಾರವಾರ ಮಹಾತ್ಮಾ ಗಾಂಧೀಜಿ ಅವರ ತತ್ವಾದರ್ಶಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರೆ ನೀಡಿದರು.
ಗಾಂಧಿ ಜಯಂತಿಯ ಅಂಗವಾಗಿ ನಗರಸಭೆಯಿಂದ ಕಚೇರಿ ಪಕ್ಕದ ಉದ್ಯಾನದಲ್ಲಿ ಸೋಮವಾರ ಆಯೊಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಪ್ರತಿಮೆಗೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ದೇಶಕ್ಕಾಗಿ ತುಂಡುಡುಗೆಯಲ್ಲಿ ದುಡಿದವರು ಮಹಾತ್ಮ ಗಾಂಧೀಜಿ. ಸತ್ಯ, ಅಹಿಂಸೆ ಶಾಂತಿತ ತತ್ವ ಆದರ್ಶಗಳಂತೆ ಸ್ವತಃ ನಡೆದು ಮಾದರಿಯಾದವರು ಎಂದು ವಿವರಿಸಿದರು.
ಜೈ ಜವಾನ್ ಜೈ ಕಿಸಾನ್ ಎಂದು ಘೋಷಣೆ ಮಾಡಿ ದೇಶದ ರೈತರಿಗೆ ಬೆನ್ನೆಲುಬಾಗಿ ನಿಂತವರು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು. ಪ್ರಾಮಾಣಿಕತೆಗೆ ಹೆಸರಾದವರು. ದೇಶದಲ್ಲಿ ಬರಗಾಲ ಉಂಟಾದಾಗ ಸ್ವತಃ ಒಂದು ಒಪ್ಪೊತ್ತು ಉಪವಾಸ ಮಾಡಿ ಇಡೀ ದೇಶಕ್ಕೆ ಕರೆ ಕೊಟ್ಟವರು ಎಂದು ಶಾಸ್ತ್ರೀಜಿ ಅವರ ಬಗ್ಗೆ ವಿವರಿಸಿದರು.

ಇದನ್ನೂ ಓದಿ:ಹುತ್ಗಾರ್ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ
ಎಂಎಲ್‌ಸಿ ಗಣಪತಿ ಉಳ್ವೇಕರ್, ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರು ಹಾಕಿಕೊಟ್ಟ ಮಾರ್ಗ ನಮಗೆ ಸದಾ ಸ್ಮರಣೀಯ ಅವರಿಗೆ ಕೋಟಿ ನಮನಗಳು ಎಂದರು. ಗಣೇಶ ಬಿಷ್ಠಣ್ಣನವರ್ ವಿಶೇಷ ಉಪನ್ಯಾಸ ನೀಡಿದರು. ನಂತರ ಜಿಲ್ಲಾಧಿಕಾರಿ, ಎಂಎಲ್‌ಸಿ ಸೇರಿ ಎಲ್ಲರೂ ಸ್ವಚ್ಛತೆಯ ಶ್ರಮದಾನ ಮಾಡಿದರು.
ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮನೋಜ ಬಾಂದೇಕರ್, ಪೌರಾಯುಕ್ತ ಕೆ.ಚಂದ್ರಮೌಳಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗೀಸ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶ ಬಿ.ಶಿವಕುಮಾರ್, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಬಹುಮಾನ ವಿತರಣೆ:
ಗಾಂಧಿ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಆಯ್ದ ವಿದ್ಯಾರ್ಥಿಗಳಿಗೆ ನಗರಸಭೆ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಬಹುಮಾಣ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಹೊನ್ನಾವರ ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆ ಸಂಜನಾ ನಂದಾ ನಾಯ್ಕ, ಹಡಿನಬಾಳ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮಿ ಗೋಪಾಲಕೃಷ್ಣ ಶೆಟ್ಟಿ, ಸಿದ್ದಾಪುರ ರವೀಂದ್ರ ನಗರದ ಲಿಟಲ್ ಪ್ಲಾವರ್ ಹೈಸ್ಕೂಲ್‌ನ ಶ್ರಾವ್ಯಾ ಗಣೇಶ ದಿವಾಕರ ಅನುಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಪದವಿಪೂರ್ವ ಕಾಲೇಜ್ ವಿಭಾಗದಲ್ಲಿ ಕುಮಟಾ ಸರಸ್ವತಿ ಪಪೂ ಕಾಲೇಜ್‌ನ ಅಕ್ಷತಾ ವಿ. ಶಾನಭಾಗ, ಹೊನ್ನಾವರ ಎಸ್‌ಡಿಎಂ ಪಪೂ ಕಾಲೇಜ್‌ನ ಮಾನಸ ಸುಬ್ರಾಯ ಅಂಬಿಗ, ಭಟ್ಕಳ ಸಿದ್ಧಾರ್ಥ ಪಪೂ ಕಾಲೇಜ್‌ನ ಪವಿತ್ರಾ ಜಯಕರ ನಾಯ್ಕ, ಪದವಿ, ಸ್ನಾತಕೋತ್ತರ ಕಾಲೇಜ್ ವಿಭಾಗದಲ್ಲಿ ಕುಮಟಾದ ಕಮಲಾ ಬಾಳಿಗಾ ವಿದ್ಯಾಲಯದ ರಶ್ಮಿ.ಪ.ಪಟಗಾರ, ತೇಜಾ ಮನೋಹರ ನಾಯ್ಕ, ಬಿಂದು ನಾರಾಯಣ ಅವಧಾನಿ ಮೊದಲ ಮೂರು ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net