ಹುತಾತ್ಮರ ದಿನ ಸರ್ವ ಧರ್ಮ ಪ್ರಾರ್ಥನೆ

gandhi bhavana
Published on

ಮಡಿಕೇರಿ:

ರಾಷ್ಟçಪಿತ ಮಹಾತ್ಮಗಾಂಧಿ ಸ್ಮರಣೆಗಾಗಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಿರ್ಮಿಸಲಾಗುತ್ತಿರುವ ಗಾಂಧಿ ಸ್ಮಾರಕ ಭವನದ ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದೆ. ಗುರುವಾರ (ಜ.30) ಹುತಾತ್ಮರ ದಿನದಂದು ಈ ಭವನದಲ್ಲೇ ಮಹಾತ್ಮನನ್ನು ನೆನೆದು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಗಾಂಧಿ ಚಿತಾಭಸ್ಮವನ್ನು ಇಲ್ಲಿಯೇ ಶಾಶ್ವ್ವತವಾಗಿ ಇರಿಸಲಾಗುತ್ತಿದ್ದು, ಈ ಬಾರಿಯ ಮಹಾತ್ಮ ಗಾಂಧಿ ಚಿತಾಭಸ್ಮದ ಮೆರವಣಿಗೆ ಕೊನೆಯ ಮೆರವಣಿಗೆ ಆಗಲಿದೆ.

ರಾಷ್ಟçಪಿತ ಮಹಾತ್ಮಗಾಂಧೀಜಿ ಕೊಡಗಿಗೂ ಬಂದಿದ್ದರು. ಅವರ ಭೇಟಿಯ ಹಲವು ನೆನಪುಗಳು ಇಲ್ಲಿ ಈಗಲೂ ಕಾಣಬಹುದಾಗಿದೆ. ಕೇರಳ ಮೂಲಕ ಕೊಡಗಿಗೆ ಪ್ರವೇಶಿಸಿದ್ದ ಮಹಾತ್ಮ 1934ರ ಫೆಬ್ರವರಿ 22ರಂದು ಪೊನ್ನಂಪೇಟೆಗೆ ಆಗಮಿಸಿದ್ದರು. ಇಲ್ಲಿಯ ರಾಮಕೃಷ್ಣ ಶಾರದಾಶ್ರಮದಲ್ಲಿ ಆ ರಾತ್ರಿ ತಂಗಿದ್ದರು. ಮಾರನೆ ದಿನ ಕೊಡಗಿನ ಜನತೆಯನ್ನು ಉದ್ದೇಶಿಸಿ ಅಲ್ಲಿನ ಗದ್ದೆ ಬಯಲಿನಲ್ಲಿ ಸ್ವಾತಂತ್ರ‍್ಯ ಚಳವಳಿಯ ಭಾಷಣ ಮಾಡಿದ್ದರು. ಭಾಷಣ ಮುಗಿಸಿದ ಗಾಂಧೀಜಿ ಸೋಮವಾರಪೇಟೆಯತ್ತ ಹೊರಟ ವೇಳೆ ಅಲ್ಲಿಂದ ಗೋಣಿಕೊಪ್ಪಲು ಮಾರ್ಗವಾಗಿ ತೆರಳಿ 1 ಕಿ.ಮೀ. ದೂರದಲ್ಲಿದ್ದ ಕೈಕೇರಿಗೂ ಭೇಟಿ ಕೊಟ್ಟಿದ್ದರು. ಇಲ್ಲಿ ಪರಿಶಿಷ್ಟಜಾತಿಯ ವೃದ್ಧೆಯೊಬ್ಬರನ್ನು ಭೇಟಿ ಮಾಡಿ ಅವರ ಕಷ್ಟ ವಿಚಾರಿಸಿದ್ದರು ಎನ್ನುವುದನ್ನು ನೆನಪಿಕೊಳ್ಳುತ್ತಾರೆ ಈ ಭಾಗದ ಹಿರಿಯರು.

ಸಮಾಜ ಸುಧಾರಕ ಗುಂಡುಗುಟ್ಟಿ ಜಿ.ಎಂ. ಮಂಜನಾಥಯ್ಯ ಅವರ ಮನೆಗೂ ಗಾಂಧೀಜಿ ಭೇಟಿ ಕೊಟ್ಟಿದ್ದರು. ಕನ್ನಡದ ಪ್ರಮುಖ ಸಣ್ಣಕಥೆಗಾರ್ತಿಯಾಗಿ ಹೆಸರು ಮಾಡಿದ್ದ ಕೊಡಗಿನ ಗೌರಮ್ಮ ಅವರ ಮನೆಗೂ ಬಂದಿದ್ದರು. ಅಲ್ಲಿ ಗೌರಮ್ಮ ತಾವು ತೊಟ್ಟಿದ್ದ ಆಭರಣಗಳನ್ನು ಬಿಚ್ಚಿ ದಲಿತರ ಸೇವೆಗೆ ಬಳಸಿಕೊಳ್ಳಲು ಗಾಂಧೀಜಿಯವರ ಮಡಿಲಿಗೆ ಹಾಕಿದ್ದರು. ಬಳಿಕ ಗಾಂಧೀಜಿ ಪಕ್ಕದ ಬೇಳೂರಿನ ಗುರಪ್ಪ ಅವರ ಮನೆಯಲ್ಲಿ ಒಂದು ರಾತ್ರಿ ತಂಗಿದ್ದರು. ಅಲ್ಲಿ ಹಿರಿಯರೊಂದಿಗೆ ಸ್ವಾತಂತ್ರ‍್ಯ ಚಳವಳಿಯ ಬಗ್ಗೆ ಸಮಾಲೋಚಿಸಿದ್ದರು. ಗುರಪ್ಪನವರ ಮನೆಯಲ್ಲಿ ಗಾಂಧೀಜಿ ಬಳಸಿದ್ದ ಮೈಸೂರ್ ಸ್ಯಾಂಡಲ್ ಸೋಪು ಮತ್ತು ಟವೆಲ್ ಅನ್ನು ಬಹಳ ವರ್ಷಗಳವರೆಗೆ ಸಂರಕ್ಷಿಸಲಾಗಿತ್ತು. ಸದ್ಯ ಅದನ್ನು ಮೈಸೂರು ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ.

ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಗೂ ಆಗಮಿಸಿದ್ದ ಮಹಾತ್ಮ ಇಲ್ಲಿ ಭಾಷಣ ಮಾಡಿದ್ದ ವಿಶಾಲ ಜಾಗ ಗಾಂಧಿ ಮೈದಾನವಾಗಿ ಈಗ ಪ್ರಸಿದ್ಧವಾಗಿದೆ. ಮೊದಲು ಇಲ್ಲಿ ಗಾಂಧಿ ಮಂಟಪ, ಅದರೊಳಗೆ ಮಹಾತ್ಮಗಾಂಧೀಜಿಯನ ಪ್ರತಿಮೆ ಇತ್ತು. ಅದೇ ಸ್ಥಳದಲ್ಲಿ ಈಗ ಸುಂದರ ಗಾಂಧಿ ಸ್ಮಾರಕ ಭವನ ತಲೆ ಎತ್ತಿದೆ. ಇದರಲ್ಲೂ ಗಾಂಧೀಜಿ ಪುತ್ತಳಿ ಇಡಲಾಗಿದ್ದು. ಸದ್ಯ ಜಿಲ್ಲಾಡಳಿತದ ಖಜಾನೆಯಲ್ಲಿ ಸಂರಕ್ಷಿಸಿ ಇಡಲಾಗಿರುವ ಗಾಂಧೀಜಿ ಚಿತಾಭಸ್ಮವನ್ನು ಇನ್ನು ಮುಂದೆ ಹೊಸದಾಗಿ ನಿರ್ಮಾಣ ಆಗಿರುವ ಗಾಂಧಿ ಸ್ಮಾರಕ ಭವನದಲ್ಲಿ ಇಡಲಾಗುವುದು. ಇಲ್ಲಿಗೆ ಭೇಟಿ ನೀಡುವವರ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗುತ್ತಿದ್ದು, ಪ್ರವಾಸಿಗರಿಗೂ ಸ್ಥಳದ ಮಹತ್ವ ತಿಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಜಿಲ್ಲಾಡಳಿತದ ಖಜಾನೆಯಲ್ಲಿ ಸಂರಕ್ಷಿಸಿ ಇಡಲಾಗುತ್ತಿರುವ ಗಾಂಧೀಜಿ ಚಿತಾಭಸ್ಮವನ್ನು ಇಲ್ಲಿಯ ತನಕ ಹುತಾತ್ಮ ದಿನದಂದು ಹೊರತೆಗೆದು ಜಿಲ್ಲಾಡಳಿತ, ಸರ್ವೋದಯ ಸಮಿತಿ ಪ್ರಮುಖರು, ಸ್ವಾತಂತ್ರ‍್ಯ ಹೋರಾಟಗಾರರು, ಸಂಘ ಸಂಸ್ಥೆಗಳ ಪ್ರಮುಖರು ಸೇರಿಕೊಂಡು ಮೆರವಣಿಗೆ ಮೂಲಕ ಗಾಂಧಿ ಮಂಟಪಕ್ಕೆ ತಂದು ಇಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಿ ಕಾರ್ಯಕ್ರಮ ಮುಗಿದ ನಂತರ ಪುನಃ ಜಿಲ್ಲಾ ಖಜಾನೆಗೆ ತೆಗೆದುಕೊಂಡು ಹೋಗಿ ಸಂರಕ್ಷಿಸಿ ಇಡಲಾಗುತ್ತಿತ್ತು. ಇದೀಗ ಗಾಂಧೀಜಿ ಚಿತಾ ಭಸ್ಮ ಗಾಂಧಿ ಸ್ಮಾರಣ ಭವನದಲ್ಲಿ ಶಾಶ್ವತವಾಗಿ ಇಡುತ್ತಿರುವುದರಿಂದ ಇಂಥ ಮೆರವಣಿಗೆ ಈ ವರ್ಷವೇ ಕೊನೆಯಾಗಲಿದೆ.

ಗಾಂಧಿ ಸ್ಮಾರಕ ಭವನದ ಮೊದಲ ಹಂತದ ಕಾಮಗಾರಿ 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ಸರ್ಕಾರದ ಅಂಗಸAಸ್ಥೆ ನಿರ್ಮಿತಿ ಕೇಂದ್ರ ಈ ಜವಾಬ್ದಾರಿ ಪೂರೈಸಿದೆ. ಈ ಮೊದಲ ಹಂತದಲ್ಲಿ ಸ್ಮಾರಕ ಕಟ್ಟಡ ಪೂರ್ಣಗೊಳಿಸಲಾಗಿದ್ದು, ಗಾಂಧೀಜಿ ಪುತ್ಥಳಿ ಅಳವಡಿಸಲಾಗಿದೆ. ಉಳಿದಂತೆ ಇತರ ವ್ಯವಸ್ಥೆಗಳನ್ನೂ ಮಾಡಲಾಗಿದೆ. ನವದೆಹಲಿಯ ರಾಜ್‌ಘಾಟ್ ಮಾದರಿಯಲ್ಲಿ ಇಲ್ಲಿ ಸ್ಮಾರಕ ನಿರ್ಮಾಣದ ಯೋಜನೆ ಹೊಂದಲಾಗಿದ್ದು. ಇದರಲ್ಲಿ ಸ್ವಾಗತ ಮಂಟಪ, ಕಚೇರಿ, ಪ್ಯಾಸೇಜ್, ನೀರಿನ ಕೊಳ, ಪ್ರದರ್ಶನ ಕೊಠಡಿ, ಸಿಟ್‌ಔಟ್ ಏರಿಯಾ, ಪ್ರಾರ್ಥನಾ ಕೊಠಡಿ, ಗಾಂಧೀಜಿ ಸಮಾಧಿ, ಗಾಂಧೀಜಿಯವರ ಪ್ರತಿಮೆ, ಗ್ರಂಥಾಲಯ ಹಾಗೂ ಉದ್ಯಾನವೂ ಇರಲಿದೆ. ಈ ಎಲ್ಲಾ ಕಾಮಗಾರಿಗಳಿಗೆ ಇನ್ನೂ ಸುಮಾರು 1 ಕೋಟಿ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ.

1948ರಲ್ಲಿ ಗಾಂಧೀಜಿ ಹತ್ಯೆಯಾಗಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ಬಳಿಕ ಸ್ವಾತಂತ್ರ‍್ಯ ಹೋರಾಟಗಾರ ಕೊಳ್ಳಿಮಾಡ ದೇವಯ್ಯ ಅವರು ಚಿತಾಭಸ್ಮವನ್ನು ಕೊಡಗಿಗೆ ತಂದು ಒಂದು ಭಾಗವನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಿದ್ದರು. ಉಳಿದ ಭಸ್ಮವನ್ನು ಜಿಲ್ಲಾ ಖಜಾನೆಯಲ್ಲಿರಿಸಲಾಗಿತ್ತು. ಪ್ರತೀ ವರ್ಷ ಜ. 30ರಂದು ನಡೆಯುವ ಹುತಾತ್ಮರ ದಿನಾಚರಣೆ ಸಂದರ್ಭ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ಗಾಂಧಿ ಮಂಟಪಕ್ಕೆ ತಂದು ಸರ್ವಧರ್ಮ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸುವುದು ಸುಮಾರು 65 ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಬಾರಿ ಗುರುವಾರ ಗಾಂಧೀಜಿ ಚಿತಾಭಸ್ಮವನ್ನು ಗಾಂಧಿ ಸ್ಮಾರಕ ಭವನಕ್ಕೆ ಸ್ಥಳಾಂತರಿಸುವುದರಿAದ ಮುಂದಿನ ವರ್ಷದಿಂದ ಈ ಸಂಪ್ರದಾಯಕ್ಕೆ ತೆರೆ ಬೀಳಲಿದೆ.

ಗಾಂಧಿ ಮೈದಾನದಲ್ಲಿ ಗಾಂಧಿ ಸ್ಮಾರಕ ಭವನದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಹಾಲಿ ಜಿಲ್ಲಾಡಳಿತದ ಖಜಾನೆಯಲ್ಲಿ ಇರುವ ಮಹಾತ್ಮ ಗಾಂಧೀಜಿ ಚಿತಾಭಸ್ಮವನ್ನು ಇನ್ನು ಮುಂದೆ ಈ ಸ್ಮಾರಕ ಭವನದಲ್ಲಿಯೇ ಶಾಶ್ವತವಾಗಿ ಇಡಲಾಗುವುದು. ಇದಕ್ಕೂ ಮೊದಲು ಹುತಾತ್ಮ ದಿನದಂದು ಪ್ರತಿವರ್ಷದಂತೆ ಜಿಲ್ಲಾ ಖಜಾನೆಯಿಂದ ಗಾಂಧಿ ಸ್ಮಾರಕ ಭವನಕ್ಕೆ ಚಿತಾಭಸ್ಮವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುವುದು. ಮುಂದಿನ ವರ್ಷದಿಂದ ಈ ಮೆರವಣಿಗೆ ಇರುವುದಿಲ್ಲ. ಹಾಗಾಗಿ ಇದೇ ಈ ಮಾದರಿಯ ಕೊನೇ ಮೆರವಣಿಗೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಳ್ಳುತ್ತೇನೆ.

ವೆಂಕಟ್ ರಾಜಾ, ಜಿಲ್ಲಾಧಿಕಾರಿ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net