ಗಾಂಧಿ ಭವನ ಶೀಘ್ರ ಲೋಕಾರ್ಪಣೆ

31 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರವು ಮಹಾತ್ಮ ಗಾಂಧೀಜಿ ವಿಚಾರಧಾರೆಗಳನ್ನು ಸಾರ್ವಜನಿಕವಾಗಿ ಹೆಚ್ಚೆಚ್ಚು ಪ್ರಚುರಪಡಿಸಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಿಸಲು ಆದೇಶಿಸಿದೆ. ಅದರಂತೆ ಧಾರವಾಡದಲ್ಲಿ ನಿರ್ಮಿಸಿದ್ದು, ಜಿಲ್ಲಾ ಉಸ್ತವಾರಿ ಸಚಿವರ ಗಮನಕ್ಕೆ ತಂದು ಶೀಘ್ರ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಹೊಸ ಬಸ್​ ನಿಲ್ದಾಣ ಎದುರಿಗೆ ನಿರ್ಮಾಣವಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಗಾಂಧಿ ಭವನ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.

ರಾಜ್ಯ ಸರ್ಕಾರ 2016-17ನೇ ಸಾಲಿನ ಆಯವ್ಯಯದಲ್ಲಿ ಪ್ರತಿ ಜಿಲ್ಲೆಯಲ್ಲಿ ತಲಾ 3 ಕೋಟಿ ರೂ. ಅನುದಾನದಲ್ಲಿ ಗಾಂಧಿ ಭವನ ನಿರ್ಮಿಸಲು 2018ರಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ಅದರಂತೆ 29 ಗುಂಟೆ ಜಮೀನಿನಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ಮಾತ್ರ ಉಳಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರೊಂದಿಗೆ ಮಾತನಾಡಿ ಜನ ಬಳಕೆಗಾಗಿ ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.

ಗಾಂಧಿ ಭವನದಲ್ಲಿ ಗೋಡೆಗಳ ಮೇಲೆ ಗಾಂಧೀಜಿ ಜೀವನ ಬಿಂಬಿಸುವ ಅತ್ಯುತ್ತಮ ಪೆಂಟಿಂಗ್​ ಬಿಡಿಸಲಾಗಿದೆ. ಗಾಂಧೀಜಿಯವರ ಪ್ರಮುಖ ಚಳುವಳಿ ದಂಡಿ ಯಾತ್ರೆ ಸೇರಿ ವಿವಿಧ ರೀತಿಯ ಘಟನೆಗಳನ್ನು ಪ್ರತಿಮೆಗಳಲ್ಲಿ ಅರಳಿಸಲಾಗಿದೆ. ಕಚೇರಿ, ತರಬೇತಿ ಕೇಂದ್ರ, ಗ್ರಂಥಾಲಯ, ವಸ್ತುಸಂಗ್ರಹಾಲಯ, ಸುಮಾರು ಎರಡನೂರು ಜನ ಆಸೀನರಾಗಬಹುದಾದ ಸಭಾಂಗಣ ನಿರ್ಮಿಸಲಾಗಿದೆ ಎಂದರು.

ಭವನ ಉಸ್ತುವಾರಿ ಬಗ್ಗೆ ಸಹ ಚಚಿರ್ಸಿ ವಾರ್ತಾ ಇಲಾಖೆ ಮಾಲೀಕತ್ವದಲ್ಲಿ ಪಾಲಿಕೆ ಅಥವಾ ನಿಗಮ ಮಂಡಳಿಗೆ ವಹಿಸಿ, ಇತರ ಜಿಲ್ಲೆಗಳಿಗೆ ಇಲ್ಲಿನ ಭವನ ಮಾದರಿಯಾಗುವಂತೆ ಕ್ರಮಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net