

ಹೊಳೆನರಸೀಪುರ : ನನ್ನ ಜೀವನವೇ ನನ್ನ ಸಂದೇಶ ಎಂದಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸತ್ಯ, ಶಾಂತಿ, ಅಹಿಂಸೆ ಮತ್ತು ಸ್ವಚ್ಛತೆಯ ಸಂದೇಶ ಭಾರತೀಯರೆಲ್ಲರಿಗೂ ದಾರಿದೀಪವಾಗಿವೆ ಹಾಗೂ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ನೀಡಿ ಸರಳ ಜೀವನ ನಡೆಸಿದ ಲಾಲ್ ಬಹಾದೂರ್ ಶಾಸ್ತ್ರಿ ಅವರು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ನುಡಿದರು.
ಬುಧವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಗಾಂಧಿ ನಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಮಹಾತ್ಮ ಗಾಂಧಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಶತಮಾನೋತ್ಸವದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಯುವ ಜನಾಂಗಕ್ಕೆ ಗಾಂಧೀಜಿ ಅವರ ಹೋರಾಟದ ಹಾದಿ ಹಾಗೂ ತತ್ವ ಆದರ್ಶಗಳು ಮಾದರಿಯಾಗಿವೆ. ಭಾರತೀಯರನ್ನು ಒಗ್ಗೂಡಿಸಿದ ಗಾಂಧೀಜಿ ಅವರ ಒಗ್ಗಟ್ಟಿನ ಮಂತ್ರ, ಗಡಿನಾಡಲ್ಲಿ ಅವರ ಹೋರಾಟದ ಮಾರ್ಗವನ್ನು ನೆನೆದು ಅವರು ನುಡಿದಂತೆ ನಾವೆಲ್ಲ ನಡೆಯಬೇಕಿದೆ ಎಂದು ತಿಳಿದರು.
ಲಾಲ್ ಬಹಾದೂರ್ ಶಾಸ್ತ್ರಿ ಅವರು ಭಾರತದ ರಾಜಕೀಯದಲ್ಲಿ ಪ್ರಮುಖರಾಗಿ ಹೊರಹೊಮ್ಮಿದ್ದಾರೆ. ಅವರ ಸರಳ ಜೀವನ ಶೈಲಿ, ಪ್ರಾಮಾಣಿಕತೆ, ಧಯರ್ಯ ಮತ್ತು ವಿನಯಶೀಲತೆ ಗುಣಗಳು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿವೆ ಎಂದು ಅಭಿಪ್ರಾಯಪಟ್ಟರು. ನಂತರ ಪಕ್ಷದ ಕಚೇರಿಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ.ಲಕ್ಷ್ಮಣ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕೂರ್ ಬಸವರಾಜು, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲೋಕೇಶ್, ಸುದರ್ಶನ್ ಬಾಬು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವಲಂಬಿಗೆ ನಾರಾಯಣ, ಪುರಸಭಾ ಸದಸ್ಯ ಬೈರ್‌ಶೆಟ್ಟಿ, ಶಿವಕುಮಾರ್, ಸತೀಶ್ ಇತರರು ಇದ್ದರು.