ಗಂಧನಹಳ್ಳಿ ಗ್ರಾಮದೇವತೆ ಶ್ರೀ ಹುಣಸಮ್ಮ ದೇವಿ ರಥೋತ್ಸವ

12 KRN-8
Published on

 ಕೆ.ಆರ್.ನಗರ: ತಾಲೂಕಿನ ಗಂಧನಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಹುಣಸಮ್ಮ ದೇವಿಯ ರಥೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ರಥಕ್ಕೆ ವಿವಿಧ ಬಗೆಯ ಬಣ್ಣಗಳ ಬಾವುಟ ಕಟ್ಟಿ ನೋಡುಗರ ಕಣ್ಮನ ಸೆಳೆಯುವಂತೆ ಹೂವುಗಳಿಂದ ಅಲಂಕರಿಸಲಾಗಿತ್ತು. ಇಡೀ ಗ್ರಾಮವೇ ತಳಿರು, ತೋರಣಗಳಿಂದ ಹಸಿರು ಮಯವಾಗಿತ್ತು. ಎಲ್ಲೆಲ್ಲೂ ತೆಂಗಿನ ಗರಿ, ಮಾವಿನ ಸೊಪ್ಪಿನ ತೋರಣ, ಬಾಳೆ ಕಂದು, ಅಡಕೆ ಹೊಂಬಾಳೆ ಕಂಗೊಳಿಸುತ್ತಿದ್ದವು.

ಶುಕ್ರವಾರ ಬೆಳಗ್ಗೆ ಕಪ್ಪಡಿ ಕ್ಷೇತ್ರದ ಕಾವೇರಿ ನದಿ ತೀರದಲ್ಲಿ ಹುಣಸಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪೂಜಾ ಕೈಂಕರ್ಯಗಳಿಂದ ಆರಾಧಿಸಲಾಯಿತು. ನಂತರ ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೊಂಬು, ಕಹಳೆ, ಮಂಗಳ ವಾದ್ಯ, ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ತಂಬಿಟ್ಟು ಆರತಿ ಬೆಳಗಿದ ಸುಮಂಗಲಿಯರು ಹಾಗೂ ತವರಿಗೆ ಬಂದ ಹೆಣ್ಣುಮಕ್ಕಳು, ನವ ದಂಪತಿಗಳು ಹಣ್ಣು, ಜವನ ಎಸೆದು ತಮ್ಮ ಇಷ್ಟಾರ್ಥ ಈಡೇರಿಸಲು ಪ್ರಾರ್ಥಿಸಿದರು.

ಸಿಂಗಾರಗೊಂಡ ಗ್ರಾಮ:

ಹಬ್ಬದ ಅಂಗವಾಗಿ ವಿದ್ಯುತ್ ದೀಪಾಂಲಕಾರದಿಂದ ಗಂಧನಹಳ್ಳಿ ಗ್ರಾಮವನ್ನು ಸಿಂಗರಿಸಲಾಗಿತ್ತು.

ಸಿಂಗಾರಗೊಂಡಿದ್ದ ರಥದಲ್ಲಿ ಹುಣಸಮ್ಮ ದೇವಿಯನ್ನು ಪ್ರತಿಷ್ಠಾಪನೆ ಮಾಡಿದ ನಂತರ ಗ್ರಾಮದ ಮುತ್ತೈದೆಯರು ಹಾಗೂ ಯುವತಿಯರು, ಬಾಲಕಿಯರು ತಂಬಿಟ್ಟು ಆರತಿ ಬೆಳಗಿ ದೇವರಲ್ಲಿ ಪ್ರಾರ್ಥನೆ ಮಾಡಿದರು. ಬಳಿಕ ರಥವನ್ನು ಎಳೆದು ಗ್ರಾಮದಲ್ಲಿ 4 ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು.

ನಾಡಿಗೆ ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಫಸಲು ಬರಲಿ ಎಂದು ಗ್ರಾಮ ದೇವತೆ ಶ್ರೀ ಹುಣಸಮ್ಮ ದೇವಿಯಲ್ಲಿ ಗ್ರಾಮದ ದೊಡ್ಡ ಯಜಮಾನ ಜಿ.ಎನ್.ರಘು ಪ್ರಾರ್ಥನೆ ಸಲ್ಲಿಸಿದರು. ಆರ್ಚಕರಾದ ಸುರೇಶ್ ಮತ್ತು ರವಿಶಂಕರ್ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಸಾವಿರಾರು ಭಕ್ತರು ಹುಣಸಮ್ಮ ದೇವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ, ಹರಕೆ ಸಲ್ಲಿಸಿದರು. ಭಕ್ತಗಣಕ್ಕೆ ಕನಕದಾಸ ಯುವಕರ ಸಂಘದಿಂದ ಮಜ್ಜಿಗೆ ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು. ರಥೋತ್ಸವದಲ್ಲಿ ಶಾಸಕ ಡಿ.ರವಿಶಂಕರ್, ಗ್ರಾಪಂ ಅಧ್ಯಕ್ಷೆ ಮಾದೇವಿ, ಮುಖಂಡರಾದ ಜಿ.ವೆಂಕಟೇಶ್, ಗಂಧನಹಳ್ಳಿ ಹೇಮಂತ್, ಸಮಾಜ ಸೇವಕಿ ಪ್ರೇಮಾ ಶಿವಣ್ಣ, ಡೇರಿ .ಮಹಾದೇವ್, ಜಿ.ಆರ್.ಸತೀಶ್, ಮಂಜುಅರಸ್, ಕೆಂಪರಾಜು, ಜಿ.ಡಿ.ಅರುಣ, ಅಭಿ ಮರೀಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net