ತೆರೆ ಮೇಲೆ ಪುನೀತ್ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

28 smg 7
Published on

ಶಿವಮೊಗ್ಗ: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಸಾಕ್ಷೃಚಿತ್ರ ‘ಗಂಧದಗುಡಿ’ ಮಲೆನಾಡು ಶಿವಮೊಗ್ಗದಲ್ಲೂ ಬಿಡುಗಡೆಗೊಂಡಿದ್ದು ಶುಕ್ರವಾರ ಸಾಕ್ಷ್ಯಚಿತ್ರ ವೀಕ್ಷಣೆಗೆ ಅಭಿಮಾನಿಗಳು ಮುಗಿಬಿದ್ದರು. ಇದೇ ವೇಳೆ ತೆರೆ ಮೇಲೆ ಅಪ್ಪುವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಕಣ್ಣೀರು ಹಾಕುತ್ತಲೇ ಹೊರಬಂದರು.

ನಗರದ ವೀರಭದ್ರೇಶ್ವರ ಚಿತ್ರಮಂದಿರ, ಸಿಟಿ ಸೆಂಟರ್‌ನ ಮಾಲ್‌ನ ಭಾರತ್ ಸಿನಿಮಾಸ್‌ನ ಒಂದು ಪರದೆಯಲ್ಲಿ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿದ್ದು ಅಭಿಮಾನಿಗಳು ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ರಾತ್ರಿಯಿಂದಲೇ ಕಾತುರದಿಂದ ಕಾದು ಕುಳಿತಿದ್ದರು. ಅಪ್ಪುವಿನ ಬೃಹತ್ ಕಟೌಟ್‌ಗೆ ಪುಷ್ಪ ನಮನ, ಹಾಲಿನ ಅಭಿಷೇಕ ಮಾಡಿದರು.

ಇದೇ ವೇಳೆ ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರಲ್ಲದೆ, ಮೆಗ್ಗಾನ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿದ್ದರು. ಜತೆಗೆ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಮೊದಲ ದಿನ ಪುಳಿಯೋಗರೆ, ಮೊಸರನ್ನ ವಿತರಿಸಿದರು.

ಬಿಕ್ಕಿಬಿಕ್ಕಿ ಅತ್ತರು....: ಗಂಧದಗುಡಿ ನೋಡಿದ ಅಭಿಮಾನಿಗಳು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಪ್ರತಿ ಪ್ರದರ್ಶನದ ಬಳಿಕವೂ ಹಲವರು ಗಳಗಳನೆ ಅಳುತ್ತಲೇ ಚಿತ್ರಮಂದಿರದಿಂದ ಹೊರ ನಡೆದ ದೃಶ್ಯಗಳು ಕಂಡುಬಂದವು. 1.37 ಗಂಟೆ ಸಾಕ್ಷ್ಯಚಿತ್ರ ಇದಾಗಿದ್ದು ಅಪ್ಪು ಅಭಿನಯದ ಕೊನೆಯ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳು ಕಣ್ಣೀರು ಹಾಕಿದರು. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಬಂದ ಮಹಿಳಾ ಅಭಿಮಾನಿಯೊಬ್ಬರು ಟಾಕೀಸ್ ಹೊರಗಿದ್ದ ಪೋಸ್ಟರ್‌ಗಳನ್ನು ನೋಡಿಯೇ ಕಣ್ಣೀರಿಟ್ಟರು. ಕೆಲವರು ಅಪ್ಪು ಪೋಸ್ಟರ್‌ಗಳಿಗೆ ನಮಸ್ಕರಿಸಿದ ದೃಶ್ಯವೂ ಮನತುಂಬಿ ಬರುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net