

ಗಂಡಸಿ : ಆಲದಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದ ತೆರೆ ಕಂಡಿದೆ. ಸ್ವಾಮಿಯ ಅಪ್ಪಣೆಯ ಮೇರೆಗೆ 11 ವರ್ಷಗಳ ಬಳಿಕ ಆಯೋಜನೆಗೊಂಡಿದ್ದ ಜಾತ್ರೆ ಸೋಮವಾರದಿಂದ ಚಾಲನೆ ಪಡೆದಿತ್ತು. 4 ದಿನಗಳ ಕಾಲ ಗ್ರಾಮದ ಮತ್ತು ಸಂಪ್ರದಾಯಗಳ ಆಚಾರ, ವಿಧಿಗಳ ಅನ್ವಯ ಶ್ರದ್ಧಾಭಕ್ತಿಯಿಂದ ಪೂಜಾದಿಗಳು ನಡೆದವು. 11 ವರ್ಷದ ನಂತರ ನಡೆದ ಜಾತ್ರೆ ನಿಮಿತ್ತ ಗ್ರಾಮದ ಪ್ರತಿಯೊಂದು ಮನೆಯೂ ಸುಣ್ಣ, ಬಣ್ಣಗಳಿಂದ ಶೃಂಗಾರಗೊಂಡಿದ್ದವು. ಪ್ರತಿ ಬೀದಿಗಳಲ್ಲೂ ರಂಗೋಲಿ ಚಿತ್ತಾರ, ಬಣ್ಣ ಬಣ್ಣದ ತಳಿರು, ತೋರಣ, ಬಾಳೆಕಂದು, ಬಣ್ಣ ಬಣ್ಣದ ದೀಪಾಲಂಕಾರಗಳು ನೋಡುಗರ ಕಣ್ಣಿಗೆ ಹಬ್ಬ ಉಂಟುಮಾಡಿದ್ದವು.ಗುರುವಾರ ಓಕುಳಿ ಆಟದ ನಂತರ ಸ್ವಾಮಿ ಸನ್ನಿಧಿಯಲ್ಲಿ ಮಹಾಮಂಗಳಾರತಿ ನಡೆಸಿ ಜಾತ್ರೋತ್ಸವಕ್ಕೆ ಮಂಗಳ ಹಾಡಲಾಯಿತು.