ನಾಗರಹಳ್ಳಿಯಲ್ಲಿ ಗ್ರಾಮ ದೇವತೆಗಳ ಜಾತ್ರೆಗೆ ತೆರೆ

16 gandasi Jatre 1
Published on

ಗಂಡಸಿ : ಹೋಬಳಿಯ ನಾಗರಹಳ್ಳಿ ಗ್ರಾಮದ ಗ್ರಾಮ ದೇವತೆಗಳಾದ ಶ್ರೀ ಪ್ಲೇಗಿನಮ್ಮ, ಶ್ರೀ ಮಾರಮ್ಮ, ಕೋಟೆ ಮಾರಮ್ಮದೇವಿಯರ ಜಾತ್ರಾ ಮಹೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಮಾರೋಪಗೊಂಡಿತು. ಗ್ರಾಮದ ಸುಮಂಗಲಿಯರ ಸೋಬಾನೆ ಪದ ಗಾಯನದೊಂದಿಗೆ ಸೋಮವಾರ ಸಕಲ ಶಾಸ್ತ್ರೋಕ್ತವಾಗಿ ಜಾತ್ರೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಅಂದು ರಾತ್ರಿ ಎಲ್ಲ ದೇವತೆಗಳಿಗೆ ಮದುವಣಗಿತ್ತಿ ಶಾಸ್ತ್ರದ ನಂತರ ಮಹಾಮಂಗಳಾರತಿ ನಡೆಸಲಾಗಿತ್ತು. ಮಂಗಳವಾರ ಬೆಳಗ್ಗೆ ಗ್ರಾಮ ದೇವತೆಗಳನ್ನು ಬೆಳ್ಳಿ ಪಲ್ಲಕ್ಕಿಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಯಿತು.

ಆರತಿ ಹೊತ್ತ ಹೆಣ್ಣು ಮಕ್ಕಳು, ವಿವಿಧ ಬಗೆಯ ವಾದ್ಯಗೋಷ್ಠಿ, ಪಟಾಕಿ ಸಿಡಿತದ ಸಂಭ್ರಮದ ನಡುವೆ ಮೂವರು ದೇವಿಯವರನ್ನು ಮೂಲಸ್ಥಾನದ ಜಾತ್ರಾ ಮೈದಾನದವರೆಗೆ ಉತ್ಸವದೊಂದಿಗೆ ಕರೆತಂದರು. ಈ ಸಂದರ್ಭ ಸೋಮನ ಕುಣಿತ ಗಮನ ಸೆಳೆಯಿತು. ನಾಗರಹಳ್ಳಿ, ನಾಗರಹಳ್ಳಿ ಕಟ್ಟೆ, ಶ್ರೀರಾಮಪುರ, ಚಾಮರಾಜಪುರ ಗ್ರಾಮಗಳ ಹರಕೆಯ ಬಲಿ ಪ್ರದಾನ ನೆರವೇರಿತು. ರಾತ್ರಿ ರಸಮಂಜರಿ ಕಾರ್ಯಕ್ರಮ ರಂಜಿಸಿತು.

ಬುಧವಾರ ಮಧ್ಯಾಹ್ನ ದೇವಿ ಉತ್ಸವದಲ್ಲಿ ವನಿತೆಯರು ಆರತಿ ಸೇವೆ ನೆರವೇರಿಸಿದರು. ಮಧ್ಯಾಹ್ನ ಬಣ್ಣದ ಓಕುಳಿ ಕಾರ್ಯಕ್ರಮದೊಂದಿಗೆ 3 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ನಂತರ ಭಕ್ತರಿಗೆ ಮಹಾ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net