

ಹುಬ್ಬಳ್ಳಿ: ವಿಜಯಪುರ ಕಮತಗಿಯ ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂಘ ಪ್ರಸ್ತುತಪಡಿಸುತ್ತಿರುವ ಹಾಸ್ಯಭರಿತ ಸಾಮಾಜಿಕ ನಾಟಕ "ಗಂಡನಿಗೆ ತಕ್ಕ ಹೆಂಡತಿ' ಜೂನ್ 28ರಿಂದ ಇಲ್ಲಿಯ ಹಳೇ ಬಸ್ ನಿಲ್ದಾಣ ಸುಜಾತಾ ಥೇಟರ್ ಬಳಿಯ ಇರಕಲ್ಲ ಅವರ ಜಾಗದಲ್ಲಿ ಪ್ರದರ್ಶನ ಕಾಣಲಿದೆ ಎಂದು ಹಿರಿಯ ಕವಿ ಬಸವರಾಜ ಬೆಂಗೇರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಿಂದ ಮೊದಲ ಬಾರಿ ಹುಬ್ಬಳ್ಳಿಯಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಂತಹ ನಾಟಕ ಇದಾಗಿದೆ. ಅದ್ಭುತವಾದ ಕಲಾವಿದರು ಇದರಲ್ಲಿ ನಟನೆ ಮಾಡಿದ್ದಾರೆ. ಆರು ತಿಂಗಳವರೆಗೆ ಇಲ್ಲಿ ನಿತ್ಯ ಎರಡು ಪ್ರದರ್ಶನ ನೀಡಲಾಗುವುದು. ಭಾನುವಾರ ಬೆಳಗ್ಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ಜೂನ್ 28ರಂದು ಮಧ್ಯಾಹ್ನ 2 ಗಂಟೆಗೆ ಮಾಜಿ ಸಂಸದ ಐ.ಜಿ. ಸನದಿ ನಾಟಕ ಉದ್ಘಾಟಿಸುವರು. ಮೂರುಸಾವಿರ ಮಠದ ಶ್ರೀಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ನಾಟಕಕಾರ ಗೋವಿಂದ ಮಣ್ಣೂರ ಅಧ್ಯಕ್ಷತೆ ವಹಿಸುವರು. ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಎಸಿಪಿಗಳಾದ ಶಿವಪ್ರಕಾಶ ನಾಯ್ಕ, ವಿನೋದ ಮುಕ್ತೇದಾರ, ನಿವೃತ್ತ ಪೊಲೀಸ್ ಅಧಿಕಾರಿ ಶಾಮರಾಜ ಸಜ್ಜನ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ ಮಾರ್ಗ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ ಪುಷ್ಟಮಾಲಾ ಅಣ್ಣಿಗೇರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎಚ್.ಬಿ. ಸರೋಜಮ್ಮ, ಹಿರಿಯ ಕಲಾವಿದರಾದ ಮಂಜುನಾಥ ಕುಂದೂರ, ನಾಗೇಶ ಶಿಗ್ಗಾಂವ ಅವರಿಗೆ ರಂಗ ಗೌರವ ನೀಡಲಾಗುವುದು ಎಂದು ಹೇಳಿದರು.
ಸಂಘದ ಮಾಲೀಕ ಪಾಪು ಕಲ್ಲೂರ, ರಿಯಾಜ ಕರಜಗಿ, ಮಹಾದೇವಪ್ಪ ಹುಣಶ್ಯಾಳ ಇದ್ದರು.