ರಾಜ್ಯದಲ್ಲಿ ಈವರೆಗೆ 5.34 ಕೋಟಿ ಜನರ ಸಮೀಕ್ಷೆ ಪೂರ್ಣ

14dvk 1
Published on

ಬೆಳಗಾವಿ :ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 5 ಕೋಟಿ 34 ಲಕ್ಷ ಜನಸಂಖ್ಯೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 41 ಲಕ್ಷ ಜನರ ಸಮೀಕ್ಷೆಯಾಗಿದೆ ಉಳಿದ ಎಲ್ಲ ಜ್ಲಿಗಳಲ್ಲಿ ಒಟ್ಟು 4 ಕೋಟಿ 93 ಲಕ್ಷ ಜನರ ಸಮೀಕ್ಷೆಯಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 44,11,331 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 8,39,192 ಜನರ ಬಗ್ಗೆ ಸಮೀಕ್ಷೆ ಕೈಗೊಳ್ಳುವುದು ಬಾಕಿ ಇದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಚೆನ್ನಾಗಿ ಸಮೀಕ್ಷೆಯಾಗುತ್ತಿದ್ದರೂ. ಬೆಂಗಳೂರು ನಗರದಲ್ಲಿ ಮಾತ್ರ ವಿಳಂಬವಾಗುತ್ತಿದೆ. ಅದನ್ನೂ ಶೀಘ್ರ ಪೂರ್ಣಗೊಳಿಸುತ್ತೇವೆ ಎಂದರು.

ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿಯ ಟೀಕೆಗಳಿಗೆ ಪ್ರತಿಕ್ರಿಯೆಸಿದ ಅವರು, ಅವರಿಗೆ ಟೀಕೆ ಬಿಟ್ಟರೆ ಬೇರೆ ಏನು ಇಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿರುವವರು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ ಎಂದು ತಿರುಗೇಟು ನೀಡಿದರು.

ಸಿಎಂ ಬದಲಾವಣೆ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಈ ಬಗ್ಗೆ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮಾಧ್ಯಮಗಳು ಪ್ರಶ್ನೆ ಕೇಳುವುದು ಕೈಬಿಟ್ಟರೆ ಈ ಚರ್ಚೆ ನಿಲ್ಲುತ್ತದೆ. ಆದರೆ ಈ ವಿಷಯದಲ್ಲಿ ಮಾಧ್ಯಮಗಳಿಗೆ ಅರ್ಜೆಂಟ್ ಇದೆ ಅನಿಸುತ್ತದೆ. ನಮ್ಮಲ್ಲಿ ಯಾವುದೇ ಸಮಸ್ಯೆ, ತೊಂದರೆ ಇಲ್ಲ. ಸಿಎಂ ಸಭೆಯಲ್ಲಿ ಇಲಾಖೆವಾರು ಚರ್ಚೆ ಆಗಿದೆ ಹೊರತು ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಆಕಾಂಕ್ಷಿಗಳು ಇರೋದು ಸಹಜ. ಆದರೆ ಈ ಬಗ್ಗೆ ಹೈಕಮಾಂಡ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net