ಅರ್ಥಪೂರ್ಣವಾಗಿ ನಡೆದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವರ್ಧಂತಿ

Ganapati Satchidananda Swamiji Vardhanti was celebrated
Published on

ಮೈಸೂರು: ನಗರದ ಶ್ರೀ ಅವಧೂತ ದತ್ತ ಪೀಠದಲ್ಲಿ ಭಾನುವಾರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 82ನೇ ವರ್ಧಂತಿ ಆಚರಿಸಲಾಯಿತು.

ವರ್ಧಂತಿ ಹಿನ್ನೆಲೆಯಲ್ಲಿ ಶ್ರೀ ಅವಧೂತ ದತ್ತ ಪೀಠದಲ್ಲಿ ದಿನವಿಡೀ ವಿವಿಧ ದೇವತಾ ಕಾರ್ಯಗಳು ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದತ್ತ ಪೀಠಕ್ಕೆ ಆಗಮಿಸಿ ಸ್ವಾಮೀಜಿಯ ಆಶೀರ್ವಾದ ಪಡೆದರು. ಈ ಸಂದರ್ಭ ನಾದಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಪ್ರತಿಯೊಬ್ಬರು ನಾನು ಎಂಬುದನ್ನು ಬಿಟ್ಟು ದೇವರ ಸ್ಮರಣೆ ಮಾಡಬೇಕು. ಆಗ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯ. ನಾನು ಎಂಬ ಅಹಂ ತೊರೆದು ಮನಸಾರೆ ದೇವರನ್ನು ಪ್ರಾರ್ಥಿಸಿದರೆ ಪ್ರತಿಯೊಬ್ಬರಿಗೂ ಒಳಿತು ಉಂಟಾಗುತ್ತದೆ. ಶ್ರೀ ದತ್ತ ವೆಂಕಟರಮಣ ಸ್ವಾಮಿ ಸನ್ನಿಧಿಗೆ ಬಂದು ಗೋವಿಂದನ ಸ್ಮರಣೆ ಮಾಡಿದರೆ ಕಷ್ಟ ಕೋಟಲೆಗಳಿಂದ ಹೊರಬಂದು ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ನಾದಮಂಟಪದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಪ್ರತ್ಯಕ್ಷ ಪಾದಪೂಜೆ ನೆರವೇರಿಸಿದರು. ನಂತರ ಚೈತನ್ಯ ಅರ್ಚನೆ ಮತ್ತು ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.

ಆಶ್ರಮದಲ್ಲಿ ಬೆಳಗ್ಗೆ ಸ್ವಾಮೀಜಿ ಅವರನ್ನು ನೃತ್ಯ, ಕೋಲಾಟದೊಂದಿಗೆ ಭವ್ಯ ಮೆರವಣಿಗೆಯಲ್ಲಿ ನಾದ ಮಂಟಪಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಶ್ರೀ ಕಾಶಿ ವಿಶ್ವನಾಥ ದೇವಾಲಯ, ಶ್ರೀ ದತ್ತ ವೆಂಕಟರಮಣ ಸ್ವಾಮಿ, ಶ್ರೀ ಶನೈಶ್ಚರ ಸ್ವಾಮಿ, ಶ್ರೀ ರಾಮದೇವರ ದೇವಸ್ಥಾನ, ಬೆಟ್ಟದಪುರದ ಶಿವ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಂದ ತರಲಾದ ತೀರ್ಥ ಪ್ರಸಾದವನ್ನು ಶ್ರೀಗಳಿಗೆ ನೀಡಲಾಯಿತು.

ಕಾಶ್ಮೀರದ ನಿವಾಸಿ ಮಹಮ್ಮದ್ ಎಂಬವರು ಕೈನಿಂದ ನೇಯ್ದಿರುವ ರಾಧೆ ಮತ್ತು ಕೃಷ್ಣ ಉದ್ಯಾನದಲ್ಲಿ ವಿಹರಿಸುತ್ತಿರುವ ಚಿತ್ರವುಳ್ಳ ಸುಂದರವಾದ ಕಾಶ್ಮೀರಿ ಶಾಲನ್ನು ಕಮಲ್ ಕಪೂರ್ ದಂಪತಿ ಶ್ರೀಗಳಿಗೆ ಸಮರ್ಪಿಸಿದರು. ಸ್ವಾಮೀಜಿ ಶಾಲನ್ನು ಧರಿಸಿ ಶಾಲಿನ ಸೌಂದರ್ಯ ಮತ್ತು ಮಹಮ್ಮದ್ ಅವರ ಕಲೆಯನ್ನು ಶ್ಲಾಘಿಸಿದರು.

ವಿವಿಧ ಬಿರುದುಗಳ ಪ್ರದಾನ

ಆಂಧ್ರಪ್ರದೇಶದ ಬಾಪಟ್ಲದ ಶ್ರೀ ಕಪಿಲವಾಯಿ ರಾಮ ಸೋಮಯಾಜುಲು ಅವರಿಗೆ ವೈದಿಕ ಕೈಂಕರ್ಯಗಳು ಮತ್ತು ಕಾಂಡತ್ರಯ ಪ್ರೌತ ಪ್ರಯೋಗದಲ್ಲಿ ಸಲ್ಲಿಸಿದ ಸೇವೆಗೆ ವೇದ ನಿಧಿ ಬಿರುದು ಪ್ರದಾನ ಮಾಡಲಾಯಿತು. ಅದೇ ರೀತಿ ವಾರಣಾಸಿಯ ಬ್ರಿಜ್ ಭೂಷಣ್ ಓಝಾ (ವ್ಯಾಕರಣ ಕ್ಷೇತ್ರ) ಅವರಿಗೆ ಶಾಸ್ತ್ರ ನಿಧಿ, ಚೆನ್ನೈನ ನಾಗೈ ಕೆ.ಮುರಳೀಧರನ್ ಅವರಿಗೆ (ಕರ್ನಾಟಕ ಸಂಗೀತ) ನಾದ ನಿಧಿ ಬಿರುದು ಪ್ರದಾನ ಮಾಡಲಾಯಿತು.

ರಾಜಮಂಡ್ರಿಯ ಪ್ರಭಲ ಸುಬ್ರಹ್ಮಣ್ಯ ಶರ್ಮಾ (ವಾಸ್ತು ಶಾಸ್ತ್ರ), ತೆನಾಲಿಯ ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್ (ಶೈವಾಗಮ), ಕೇರಳದ ತ್ರಿಚೂರ್‌ನ ತ್ರಿಚೂರ್ ಸಹೋದರರು ಖ್ಯಾತಿಯ ಕೃಷ್ಣಮೋಹನ್ ಮತ್ತು ರಾಮ್ ಕುಮಾರ್ ಮೋಹನ್ (ಕರ್ನಾಟಕ ಸಂಗೀತ) ಅವರಿಗೆ ದತ್ತ ಪೀಠ ಆಸ್ಥಾನ ವಿದ್ವಾನ್ ಬಿರುದು ಪ್ರದಾನ ಮಾಡಲಾಯಿತು.

ಮೈಸೂರಿನ ಮಾಯಾ ಸೀತಾರಾಮ್ (ಬೋನ್ಸಾಯ್) ಅವರಿಗೆ ಸಸ್ಯ ಬಂಧು, ವಿಜಯವಾಡದ ಕರುಮೂರಿ ಲಲಿತಮ್ಮ (ಸಮುದಾಯ ಸೇವೆ) ಅವರಿಗೆ ಜಯಲಕ್ಷ್ಮೀ ಬಿರುದು, ಹೈದರಬಾದ್‌ನ ಸಂಪರ ನಾಗ ಸಾಯಿ ರಾಮಚಂದ್ರ ಶೇಖರ್ (ಸಮುದಾಯ ಸೇವೆ) ಅವರಿಗೆ ದತ್ತ ಪೀಠ ಬಂಧು ಪುರಸ್ಕಾರ ಪ್ರದಾನ ಮಾಡಲಾಯಿತು.

ಗಮನ ಸೆಳೆದ ಶೋಭಾಯತ್ರೆ

ಶ್ರೀ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 82ನೇ ವರ್ಧಂತಿ ಅಂಗವಾಗಿ ವಿಪ್ರ ವಕೀಲರ ಪರಿಷತ್ ವತಿಯಿಂದ ಭಾನುವಾರ ನಗರದಲ್ಲಿ ಶೋಭಾಯಾತ್ರೆ ನಡೆಯಿತು. ನಗರದ ಚಾಮುಂಡಿಪುರಂ ವೃತ್ತದಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಹಲವರು ಪಾಲ್ಗೊಂಡಿದ್ದರು. ವೇದಘೋಷ ತಂಡ, ವೀರಗಾಸೆ, ನಂದಿಧ್ವಜ, ಭಜನಾ ಮಂಡಳಿಗಳ ಜತೆಗೆ ಸಾರೋಟಿನಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಲಾಯಿತು.

‘ಶ್ರೀ ಅವಧೂತ ದತ್ತಪೀಠದ ಮೂಲಕ ಸಾವಿರಾರರು ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಜೀವನ ನಡೆಸುತ್ತಿದ್ದಾರೆ. ಸ್ವಾಮೀಜಿ ಅವರು ನಗರದಲ್ಲಿ ಎಲ್ಲ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ, ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ವರ್ಧಂತಿ ಪ್ರಯುಕ್ತ ಶೋಭಾಯಾತ್ರೆ ನಡೆಸಲಾಗಿದೆ’ ಎಂದು ವಿಪ್ರ ವಕೀಲರ ಪರಿಷತ್ ಅಧ್ಯಕ್ಷ ಎಂ.ಎಸ್. ರವೀಂದ್ರ ತಿಳಿಸಿದರು.

ಈ ಸಂದರ್ಭ ಮೇಲುಕೋಟೆಯ ವೆಂಗಿಪುರ ನಂಬಿಮಠದ ಇಳೈ ಆಳ್ವಾರ್ ಸ್ವಾಮಿ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ವಿಪ್ರ ವಕೀಲರ ಪರಿಷತ್ ಅಧ್ಯಕ್ಷ ಎಂ.ಎಸ್. ರವೀಂದ್ರ, ಪದಾಧಿಕಾರಿಗಳಾದ ಡಿ.ಸಿ. ಅನಂತ ಕುಮಾರ್, ಎಸ್.ಜೆ. ಮಧ್ವರಾಜ್, ಎಸ್.ಎನ್. ಪ್ರಕಾಶ್, ಸಿ.ಆರ್. ಸತ್ಯಪ್ರಕಾಶ್, ಎಚ್.ವಿ. ಶ್ರೀನಾಥ್, ಕೆ.ಎನ್. ರಾಮಮೂರ್ತಿ, ಎಸ್.ಜೆ. ಅಶೋಕ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net