

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದ ವಾಟರ್ ಟ್ಯಾಂಕ್ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಅದ್ಧೂರಿಯಾಗಿ ವಿಸರ್ಜನೆ ಮಾಡಲಾಯಿತು.
ಗ್ರಾಮದ ಮುತ್ತೇಗೆರೆ ರಸ್ತೆಯ ವಾಟರ್‌ಟ್ಯಾಂಕ್ ಆವರಣದಲ್ಲಿ ಕಳೆದ ಹದಿನೈದು ವರ್ಷದಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಒಂದು ತಿಂಗಳ ಹಿಂದೆ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜಿಸಲಾಯಿತು.
ಗಣಪತಿಗೆ ವಿಶೇಷ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ಮಹಿಳಾ ಮಂಗಳವಾದ್ಯ ತಂಡ, ಕೀಲು ಕುದುರೆ ತಂಡ, ನೂರು ಜನರ ತಮಟೆ ವಾದ್ಯ ತಂಡ, ದೇವರ ಪಟದ ತಂಡ, ವೀರಗಾಸೆ, ಬೃಹತ್ ಆಂಜನೇಯ ವೇಷಧಾರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು. ಮೆರವಣಿಗೆಯುದ್ದಕ್ಕೂ ವರ್ತಕರು, ಯುವಕರು ಸಾಮೂಹಿಕ ನೃತ್ಯ ಮಾಡಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಿ ರಾತ್ರಿ 7 ಗಂಟೆಗೆ ದೊಡ್ಡಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಸಾವಿರಾರೂ ಜನರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಬಸರಾಳು ಠಾಣೆ ಪಿಎಸ್‌ಐ ಶಶಿಧರ್ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.
ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿಗೌಡ, ಕೆಂಚನಹಳ್ಳಿ ಪುಟ್ಟಸ್ವಾಮಿ, ಬಸವೇಗೌಡ, ಶಂಕರ್‌ಪಟೇಲ್, ಬಿ.ಆರ್.ಶ್ರೀನಿವಾಸ್, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಆರ್.ಸುರೇಶ್, ಪೆಟ್ರೋಲ್ ಬಂಕ್ ವಿನೋದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪೂರ್ಣಯ್ಯ, ಸದಸ್ಯ ಸುನೀಲ್, ಡೇರಿ ಮಾಜಿ ಅಧ್ಯಕ್ಷ ಬಿ.ವಿ.ತಿಮ್ಮೇಗೌಡ, ಜೆಸಿಬಿ ರಮೇಶ್, ಮಧುಸೂದನ್ ಇತರರಿದ್ದರು.
ಐದು ದಿನ ಪೂಜೆ: ಸಂಪ್ರದಾಯದಂತೆ ವಿಸರ್ಜನೆ ನಂತರ ದೊಡ್ಡ ಕೆರೆಯಿಂದ ಹೊಸ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಸಂಗ್ರಹಿಸಿ ಗಣಪತಿ ಪ್ರತಿಷ್ಠಾಪನಾ ಮಂಟಪದಲ್ಲಿಟ್ಟು ಐದು ದಿನ ಪೂಜೆ ಸಲ್ಲಿಸಲಾಗುತ್ತಿದೆ. ಸೆ.28ರಂದು ಸಾಮೂಹಿಕ ಮೆರವಣಿಗೆ ಮಾಡಿ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಆವರಣದ ಬಳಿಯ ನಾಗರಬನದ ಅರಳಿಕಟ್ಟೆಗೆ ವಿಸರ್ಜನೆ ಮಾಡಲಾಗುತ್ತದೆ.