

ಮೊಳಕಾಲ್ಮೂರು: ಸಾಮರಸ್ಯ ಬೆಸೆಯುವ ಪಟ್ಟಣದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ವರ ಸಹಕಾರ ನೀಡಬೇಕು ಎಂದು ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಹೇಳಿದರು.
ಹಬ್ಬ ಆಚರಣೆ ಸಿದ್ಧತೆ ಹಿನ್ನೆಲೆಯಲ್ಲಿ ಬಿಇಒ ಕಚೇರಿ ಆವರಣದಲ್ಲಿ ಗಣೇಶ ಸೇವಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ಎರಡ್ಮೂರು ವರ್ಷಗಳಲ್ಲಿ ಕರೊನಾದಿಂದ ಗಣೇಶ ಚತುರ್ಥಿಯನ್ನ ವಿಜೃಂಭಣೆಯಿಂದ ಆಚರಿಸಲಾಗಿಲ್ಲ. ಈ ವರ್ಷ ಸೆ.19 ರಂದು ಅರ್ಥಪೂರ್ಣವಾಗಿ ನೆರವೇರಿಸಲು ನಾಗರಿಕರು ಉತ್ಸುಕರಾಗಿದ್ದಾರೆ ಎಂದರು.
ಸಾರ್ವಜನಿಕರ ಆರ್ಥಿಕ ನೆರವಿನೊಂದಿಗೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಗತ್ಯ ಕಾರ್ಯಕ್ರಮಗಳ ಪಟ್ಟಿ ಸಿದ್ಧತೆಗೆ ಆಸಕ್ತರು ಕೈ ಜೋಡಿಸಬೇಕು ಎಂದು ಕೋರಿದರು.
ಹಿರಿಯ ಮುಖಂಡ ಚಂದ್ರಶೇಖರ್ ಗೌಡ್ರು ಮಾತನಾಡಿ, ಪಟ್ಟಣದಲ್ಲಿ ಪ್ರತಿ ವರ್ಷ ಗಣೇಶನನ್ನು ಕೂರಿಸಿ ಹಬ್ಬ ಆಚರಿಸಲಾಗುತ್ತಿದೆ. 56ನೇ ವರ್ಷದ ಈ ಆಚರಣೆ ವಿಶೇಷವಾಗಿದೆ.
ವಿವಿಧ ಸಾಂಸ್ಕೃತಿಕ ಚಟುವಟಿಕೆ, ಸುಗಮ ಸಂಗೀತ, ಭರತ ನಾಟ್ಯ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಪದಾಧಿಕಾರಿಗಳಾದ ಡಿ.ಎಂ.ಈಶ್ವರಪ್ಪ, ಡಾ.ಪಿ.ಎಂ.ಮಂಜುನಾಥ, ಬಸಣ್ಣ, ಕೆ.ಪಿ.ಗೋಪಾಲ, ಪೃಥ್ವಿರಾಜ್, ಕನಕ ರಾಜಶೇಖರ, ಕಿರಣ್ ಗಾಯಕ್ವಾಡ್, ಆನಂದ್, ಈರಣ್ಣ, ರವಿಕುಮಾರ, ನಾಗರಾಜ್, ಶಾಂತರಾಮ್, ನುಂಕೇಶ್ ಗೌಡ, ಚಂದ್ರಣ್ಣ, ಉದಯ ಶಂಕರ್ ಇತರರಿದ್ದರು.