

ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಕೋಟೆನಗರಿ ಸೇರಿ ಜಿಲ್ಲಾದ್ಯಂತ ಪ್ರತಿಷ್ಠಾಪಿಸಿದ್ದ ಸಾವಿರಾರು ಪೈಕಿ 405ಕ್ಕೂ ಅಧಿಕ ಗಣಪತಿ ಮೂರ್ತಿಗಳ ವಿಸರ್ಜನಾ ಕಾರ್ಯ ಐದನೇ ದಿನವಾದ ಶುಕ್ರವಾರ ರಾತ್ರಿ ಶಾಸ್ತ್ರೋಕ್ತವಾಗಿ ನೆರವೇರಿತು.
ಈ ವೇಳೆ ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ… ಎಂಬ ಜಯಘೋಷವನ್ನು ಭಕ್ತರು ಮೊಳಗಿಸಿದರು.
ಚಿಕ್ಕ ಹಾಗೂ ಬೃಹತ್ ಮಂಟಪಗಳಲ್ಲಿ ಪ್ರತಿಷ್ಠಾಪಿಸಿದ್ದ ಸ್ವಾಮಿಯ ಮೂರ್ತಿಗಳಿಗೆ ಮುಂಜಾನೆಯಿಂದಲೇ ಸುಪ್ರಭಾತ ಸೇವೆ, ಅಷ್ಟೋತ್ತರ, ಪ್ರಾರ್ಥನೆ, ಅರ್ಚನೆ, ಮಹಾಮಂಗಳಾರತಿ ಸೇರಿ ಇತರ ಪೂಜಾ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಹಿತು. ಹಲವೆಡೆ ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.
ಜಿಲ್ಲೆಯ ನಗರ, ಪಟ್ಟಣ, ವಿವಿಧ ಗ್ರಾಮಗಳು ಒಳಗೊಂಡು ಗಲ್ಲಿ-ಗಲ್ಲಿಗಳಲ್ಲೂ ಕಳೆಗಟ್ಟಿದ ಗಣೇಶೋತ್ಸವದ ಅಂಗವಾಗಿ ವಿಸರ್ಜನೆಗೂ ಒಂದು ದಿನ ಮುನ್ನವೇ ಗುರುವಾರ ಹಲವೆಡೆ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಉತ್ಸವ ಆಚರಿಸಲು ಸಹಕರಿಸಿದ ಅನೇಕರಿಗೆ ಗಣಪನ ಸನ್ನಿಧಿಯಲ್ಲಿ ಕುಟುಂಬ ಸಮೇತ ಸಂಕಲ್ಪ ಪೂಜೆ ನೆರವೇರಿಸಲಾಯಿತು.
ಶುಕ್ರವಾರ ಮಧ್ಯಾಹ್ನ 3ರ ನಂತರ ಅಲಂಕೃತ ಟ್ರಾೃಕ್ಟರ್‌ನೊಳಗೆ ವಿವಿಧ ರೂಪಗಳಲ್ಲಿದ್ದ ವಿಘ್ನ ನಿವಾರಕ ಏಕದಂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಬೃಹತ್ ಹೂವಿನ ಹಾರಗಳನ್ನು ಹಾಕಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಪಟಾಕಿ ಸಿಡಿಸಿ, ವಿವಿಧ ವರ್ಣದ ಪುಷ್ಪ ಮಳೆಗೈದು ಸ್ವಾಮಿಯನ್ನು ಮಾರ್ಗಗಳಲ್ಲಿ ಸ್ವಾಗತಿಸಲಾಯಿತು. ಹಣೆಯ ಮೇಲೆ ತಿಲಕವಿಟ್ಟು, ಕೇಸರಿ ರುಮಾಲು ಧರಿಸಿದ್ದ ಚಿಣ್ಣರು, ಯುವಕರು ಡಿಜೆ ಹಾಡುಗಳ ಸದ್ದಿಗೆ ಮೈಮರೆತು ಕುಣಿದು ಸಂಭ್ರಮಿಸಿದರು. ಕಹಳೆ, ಡೊಳ್ಳು, ಉರುಮೆ, ತಮಟೆ, ಗೊಂಬೆ ವೇಷಧಾರಿಗಳು ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು. ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ್ದ ಸ್ಥಳಗಳಲ್ಲಿ ವಿಸರ್ಜನಾ ಕಾರ್ಯ ನೆರವೇರಿಸಿದರು.
ಮೆರವಣಿಗೆ ಅಂಗವಾಗಿ ಐದನೇ ದಿನವೂ ವಿವಿಧೆಡೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ 35, ತಾಲೂಕಿನ ತುರುವನೂರು ಠಾಣೆ ವ್ಯಾಪ್ತಿಯಲ್ಲಿ 30, ಭರಮಸಾಗರ 40, ಹೊಳಲ್ಕೆರೆ 52, ಚಿಕ್ಕಜಾಜೂರು 40, ಐಮಂಗಲ 35, ಚಳ್ಳಕೆರೆ, ಪರಶುರಾಂಪುರ ತಲಾ 26 ಒಳಗೊಂಡು ವಿವಿಧೆಡೆ ಸೇರಿ 405ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.