

ಚಿತ್ರದುರ್ಗ: ದೇಶದಲ್ಲೇ ಪ್ರಸಿದ್ಧಿ ಪಡೆದಿರುವ ಕೋಟೆ ನಾಡು ಚಿತ್ರದುರ್ಗದ ಹಿಂದು ಮಹಾ ಗಣಪತಿಯ ಶೋಭಾಯಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆ ಯಿಂದ ನೆರವೇರಿತು.
ನಾಡಿನ ನಾನಾ ಮಠಾಧೀಶರು, ಸಂತರು, ಗಣ್ಯರು, ರಾಜಕಾರಣಿಗಳು, ಕಲಾವಿದರು ಸೇರಿದಂತೆ ರಾಜ್ಯ-ಹೊರ ರಾಜ್ಯಗಳ ಭಕ್ತ ಸಾಗರ ಈ ವಿರಾಟ ದೃಶ್ಯಕ್ಕೆ ಸಾಕ್ಷಿಯಾಯಿತು.
ಬೆಳಗ್ಗೆ 11-30ಕ್ಕೆ ಶುರುವಾದ ಶೋಭಾಯಾತ್ರೆ ರಾತ್ರಿ 11-30 ಕಳೆದರೂ ಸಾಗಿಯೇ ಇತ್ತು. ಮಧ್ಯರಾತ್ರಿ 12ಗಂಟೆ ಬಳಿಕ ಬಳಿಕ ಚಂದವಳ್ಳಿ ಕೆರೆಯಲ್ಲಿ ಗಣೇಶನ ಮೂರ್ತಿ ವಿಸರ್ಜನೆಯೊಂದಿಗೆ ಉತ್ಸವಕ್ಕೆ ತೆರೆ ಬಿತ್ತು.
ಈ ಶೋಭಾಯಾತ್ರೆ ಶಕ್ತಿ-ಭಕ್ತಿಯ ಸಂಗಮವಾಗಿ ಸಂಚಲನ ಸೃಷ್ಟಿಸಿತು. ಪಕ್ಷ ಭೇದ ಮರೆತು ಎಲ್ಲರೂ ಸಾಥ್ ನೀಡಿದ್ದರು. ಒಗ್ಗಟ್ಟಿನ ಮೂಲಕ ವಿರಾಟ ಹಿಂದು ಶಕ್ತಿಯ ಪ್ರದರ್ಶನವೂ ಆಯಿತು.
ಮೆರವಣಿಗೆ ಉದ್ದಕ್ಕೂ ದೇಶ, ದೇವರು, ಸ್ವಾತಂತ್ರೃ ಯೋಧರು ಹಾಗೂ ರಾಷ್ಟ್ರಭಕ್ತರ ಸ್ಮರಣೆ ಮಾರ್ದನಿಸಿತು. ಭಾರತ್ ಮಾತಾ ಕೀ ಜೈ, ಹಿಂದು ಧರ್ಮಕ್ಕೆ ಜೈ, ವೀರಾಂಜನೇಯಸ್ವಾಮಿಗೆ ಜೈ, ಜೈ ಶ್ರೀರಾಮ್, ‘ಹಿಂದು ಮಹಾಗಣಪತಿಗೆ ಜೈ’ ಎಂಬ ಜಯಘೋಷಗಳು ಅನುರಣಿಸಿದವು.
ಕೇಸರಿ ಶಾಲು, ಪೇಟ, ರುಮಾಲು ಧರಿಸಿದ್ದ ಯುವಕ, ಯುವತಿಯರ ತಂಡಗಳು ಪ್ರತ್ಯೇಕವಾಗಿ ಕುಣಿದು ಕುಪ್ಪಳಿಸಿದವು. ಜನದಟ್ಟಣೆ ಹೆಚ್ಚಿದ್ದರಿಂದ ಕೆಲವಡೆ ಬ್ಯಾರಿಕೇಡ್‌ಗಳು ನೆಲಕ್ಕುರುಳಿದವು. 108 ವಾಹನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎಂ.ಚಂದ್ರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಬಿಜೆಪಿ ಮುಖಂಡ ಎಂ.ಸಿ.ರಘುಚಂದನ್, ಜಿ.ಎಸ್.ಅನಿತ್‌ಕುಮಾರ್ ಹಾಗೂ ಸೌಭಾಗ್ಯಾ ಬಸವರಾಜನ್ ಇತರರಿದ್ದರು.
ದಾವಣಗೆರೆ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ತುಮಕೂರು ಸೇರಿ ರಾಜ್ಯದ ವಿವಿಧೆಡೆ ಹಾಗೂ ಕೇರಳ, ಮಹಾರಾಷ್ಟ್ರ, ಆಂಧ್ರದಿಂದ ಭಕ್ತರು ಆಗಮಿಸಿದ್ದರು.
ರಾರಾಜಿಸಿದ ಸಾವರ್ಕರ್ ಭಾವಚಿತ್ರ: ಗಣಪತಿ ಮೂರ್ತಿ ಮುಂಭಾಗ ಶಿವಾಜಿ ಮಹಾರಾಜ್, ಶ್ರೀರಾಮ, ಆಂಜನೇಯ ಸ್ವಾಮಿ ಭಾವಚಿತ್ರಗಳು ಅಲಂಕೃತಗೊಂಡಿದ್ದವು.ವೀರ ಸಾರ್ವಕರ್, ಹಿಂದು ಕಾರ್ಯಕರ್ತರಾದ ಹರ್ಷ, ಶಿವು ಉಪ್ಪಾರ್ ಭಾವಚಿತ್ರಗಳು ರಾರಾಜಿಸಿದವು. ಮದಕರಿನಾಯಕ ವೃತ್ತದಲ್ಲಿ ಗಣೇಶಮೂರ್ತಿ ಮೇಲೆ ಕ್ರೇನ್ ಮೂಲಕ ಪುಷ್ಪ ಮಳೆ ಸುರಿಯುತ್ತಿದ್ದಂತೆ ಜನರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದರು.ಗಣಪತಿ ಬಪ್ಪಾ ಮೋರಯಾ.. ಮಂಗಳಮೂರ್ತಿ ಮೋರಯಾ.. ಎಂಬ ಘೋಷಣೆ ಮೊಳಗಿದವು.
ವಿಷ್ಣು ಅವತಾರ: ಜೈನಧಾಮದಲ್ಲಿ ಸೆ.18ರಂದು ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಎಡಗೈಯಲ್ಲಿ ಚಕ್ರ, ಶಂಕು, ಬಲಗೈಯಲ್ಲಿ ಗಧೆ, ಭಕ್ತರಿಗೆ ಅಭಯಹಸ್ತ ನೀಡುವ ವಿಷ್ಣು ಅವತಾರದಲ್ಲಿ ಸರ್ಪಾಸನದಲ್ಲಿ ಗಣೇಶ ವಿರಾಜಮಾನನಾಗಿದ್ದ.
ಕುಣಿದು ಕುಪ್ಪಳಿಸಿದ ಯುವ ಪೀಳಿಗೆ: ಮಧ್ಯಾಹ್ನ 12ಕ್ಕೆ ಯಾತ್ರೆ ಆರಂಭವಾಯಿತು. ಜಿಲ್ಲಾಸ್ಪತ್ರೆ ದಾಟುವವವರೆಗೆ ಹೆಚ್ಚು ಸದ್ದು ಮಾಡದ ಡಿಜೆಗಳು ಬಳಿಕ ಭೋರ್ಗರೆದವು. ಭಕ್ತಿಗೀತೆ ಸಹಿತ ವಿವಿಧ ಹಾಡುಗಳಿಗೆ ಯುವಪಡೆ ಕುಣಿದು ಕುಪ್ಪಳಿಸಿತು. ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್, ಅಂಬರೀಶ್, ರವಿಚಂದ್ರನ್, ದರ್ಶನ್, ಉಪೇಂದ್ರ, ಸುದೀಪ್ ಒಳಗೊಂಡು ಕನ್ನಡ ನಟರ, ತೆಲುಗು, ಹಿಂದಿ ಸಿನಿಮಾ ಹಾಡುಗಳಿಗೆ ಯುವಸಮೂಹ ಹೆಜ್ಜೆ ಹಾಕಿತು.ಐದಕ್ಕೂ ಹೆಚ್ಚು ಡಿಜೆಗಳಿದ್ದವು. ಒಂದೊಂದು ಡಿಜೆ ಬಳಿ 15 ಸಾವಿರಕ್ಕೂ ಹೆಚ್ಚು ಜನರಿದ್ದರು.
ರಾರಾಜಿಸಿದ ಭಾವುಟಗಳು: ಆಂಜನೇಯ ಸ್ವಾಮಿಯ ಸಾವಿರಕ್ಕೂ ಅಧಿಕ, ಭಗತ್‌ಸಿಂಗ್, ಶಿವಾಜಿ ಮಹಾರಾಜ್, ಸುದೀಪ್, ವಿಷ್ಣುವರ್ಧನ್, ಪುನೀತ್ ರಾಜಕುಮಾರ್ ಹೀಗೆ.. ಹೀಗೆ ನೆಚ್ಚಿನ ದೈವ, ದೇಶಭಕ್ತರ, ಸಿನಿಮಾ ನಟರ ಭಾವಚಿತ್ರಗಳು ಕೇಸರಿ ಬಾವುಟದೊಳಗೆ ರಾರಾಜಿಸಿದವು.
ಕಲಾತಂಡಗಳ ಮೆರುಗು: ದಕ್ಷಿಣ ಕನ್ನಡ ಜಿಲ್ಲೆಯ ಚೆಂಡೆ ಮದ್ದಳೆ ಭಕ್ತಿಭಾವ ಹೊರಹೊಮ್ಮಿಸಿತು. ಪ್ರತಿ ನಿಮಿಷಕ್ಕೂ ಬದಲಾಗುತ್ತಿದ್ದ ಇಂಪಾದ ಸದ್ದು ಕಿವಿಗೆ ಮುದ ನೀಡುತ್ತಿತ್ತು. ಸ್ಥಳೀಯ ಡೊಳ್ಳು, ಉರುಮೆ, ತಮಟೆ ಸಹಿತ ವಿವಿಧ ಕಲಾತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದ್ದವು.
ಗಮನ ಸೆಳೆದ ವೇಷಧಾರಿಗಳು: ಗಣಪತಿ, ಓಂ, ಶ್ರೀ, ಶಿವನ ಚಿತ್ರವನ್ನು ಮುಖದ ಮೇಲೆ ಕೆಲವರು ಬರೆಸಿಕೊಂಡಿದ್ದರು. ಹಲವರು ಸ್ಥಳೀಯವಾಗಿ ಮಾರಾಟವಾಗುತ್ತಿದ್ದ ವಿವಿಧ ಮುಖವಾಡಗಳನ್ನು ಧರಿಸಿದ್ದರು. ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಾವಿರಾರು ಬೈಕ್‌ಗಳು: ಅತಿ ಹೆಚ್ಚು ಜನ ಸೇರುವ ಕಾರಣ ರಾತ್ರಿ ಬಳಿಕ ಊರುಗಳತ್ತ ಹಿಂದಿರುಗಲು ಬಸ್‌ಗಳ ಅವಲಂಬನೆ ಬೇಡ ಎಂಬ ಕಾರಣಕ್ಕೆ ದಾವಣಗೆರೆ, ಜಗಳೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಚಿತ್ರದುರ್ಗ, ಶಿರಾ ತಾಲೂಕಿನ ಮೂಲೆ-ಮೂಲೆಗಳಿಂದ ಜನರು ಸಾವಿರಾರು ದ್ವಿಚಕ್ರ, ಆಟೋ, ಆಪೇ, ಟಾಟಾ ಏಸ್ ವಾಹನಗಳಲ್ಲಿ ಆಗಮಿಸಿದ್ದರು.
ಕಟ್ಟಡ, ಡಿವೈಡರ್ ಮೇಲೂ ಜನ: ಬಿ.ಡಿ.ರಸ್ತೆಯ ಇಕ್ಕೆಲದ ಕಟ್ಟಡಗಳು, ರಸ್ತೆ ವಿಭಜಕದ ಮೇಲೆ ನಿಂತು ಜನರು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಕೆಲವರು ರಸ್ತೆಗಿಳಿಯದೆ ತಾವು ನಿಂತ ಕಟ್ಟಡಗಳ ಮೇಲೆಯೇ ಹೆಜ್ಜೆ ಹಾಕಿ ಸಂಭ್ರಮಿ ಸಿದರು. ಜೈನಧಾಮದಿಂದ ಸಂಗೊಳ್ಳಿರಾಯಣ್ಣ ವೃತ್ತದವರೆಗೆ ಅತಿ ಹೆಚ್ಚು ಜನಸ್ತೋಮವಿತ್ತು.
ಶೋಭಾಯಾತ್ರೆ ಪ್ರಮುಖ:
4.5 ಕಿ.ಮೀ. ಯಾತ್ರೆಯ ಮಾರ್ಗದಲ್ಲಿ 2.5 ಕಿ.ಮೀ.ವರೆಗೆ ಜನಸಾಗರ
ಪೊಲೀಸರ ಸರ್ಪಗಾವಲು.
ಮದಕರಿನಾಯಕ ವೃತ್ತದಲ್ಲಿ ಮಹಾಗಣಪನಿಗೆ ಪುಷ್ಪಮಳೆ.
ಜೈನಧಾಮ ಮತ್ತು ಗಾಂಧಿ ವೃತ್ತದಲ್ಲಿ ವರ್ಣಮಯ ಪಟಾಕಿ ಸಿಡಿಸಿ ಸಂಭ್ರಮ.
ವಿವಿಧ ಸಮಾಜ, ಸಂಘ-ಸಂಸ್ಥೆಗಳಿಂದ ಪ್ರಸಾದ, ಮಜ್ಜಿಗೆ ವಿತರಣೆ.
ನಗರ ಪ್ರವೇಶ ನಿರ್ಬಂಧ, ಬ್ಯಾರಿಕೇಡ್ ಮೂಲಕ ಭದ್ರತೆ.
ಚಂದ್ರವಳ್ಳಿ ಬಾವಿಯಲ್ಲಿ ರಾತ್ರಿ 11.30ರ ನಂತರ ವಿಸರ್ಜನೆ.