ದೇವಾಲಯಗಳಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಸಂಭ್ರಮ

sharavu1
Published on

ಮಂಗಳೂರು: ನಗರದ ಶರವು ಶ್ರೀ ಮಹಾಗಣಪತಿ ದೇವಳ ಸೇರಿದಂತೆ ಜಿಲ್ಲೆಯ ಗಣಪತಿ ಹಾಗೂ ಇತರ ಪ್ರಮುಖ ದೇವಳದಲ್ಲಿ ಸಂಭ್ರಮದ ಅಂಗಾರಕ ಸಂಕಷ್ಟಹರ ಚತುರ್ಥಿ ಮಹೋತ್ಸವ ಮಂಗಳವಾರ ನಡೆಯಿತು.


ಶರವು ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತರು ಆಗಮಿಸಿ, ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಹೋಮ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಇಡೀ ದಿನ ಸಾವಿರಾರು ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದರು. 11 ಗಂಟೆಗೆ ದೇವರ ಗಣಯಾಗ ಪೂರ್ಣಾಹುತಿ, ಗಣಹೋಮ, ಅಪ್ಪದ ಪ್ರಸಾದ ವಿತರಣೆ ಆರಂಭವಾಯಿತು.


ಶರವು ದೇವಳದ ದೇವಳದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸಿ ಮತ್ತು ಸುದೇಶ್ ಶಾಸಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ಎಸ್. ರಾಹುಲ್ ಶಾಸಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾಂಸ್ಕೃತಿಕ ವೈವಿಧ್ಯ: ಬೆಳಗ್ಗೆ 9ರಿಂದ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ರಾಗ ಸಂಗಮ ಮ್ಯೂಸಿಕ್ಸ್ ತಂಡದ ಎಸ್. ಶ್ರೀನಿವಾಸಮೂರ್ತಿ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ, ಸಂಜೆ 5.30ರಿಂದ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ತಾಳಮದ್ದಳೆ ‘ರುಕ್ಮಿಣಿ ಕಲ್ಯಾಣ’ ನಡೆಯಿತು.


ದೇಗುಲಗಳಲ್ಲಿ ವಿಶೇಷ ಪೂಜೆ: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಳ, ಗಣೇಶಪುರ ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳೂರು ಮಾರಿಯಮ್ಮ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಳಗಳಲ್ಲಿ ಅಂಗಾರಕ ಸಂಕಷ್ಟಿ ವೃತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net