ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಬದ್ಧ

23 sgr 2
Published on

ಸಾಗರ: ಗಣಪತಿ ಕೆರೆ ಅಳತೆ ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಪಿಗೆ ಎಲ್ಲರೂ ಬದ್ಧ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಶನಿವಾರ ನಗರದ ಗಣಪತಿ ಕೆರೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು ಪತ್ರಕರ್ತರ ಜತೆ ಮಾತನಾಡಿ, ಗಣಪತಿ ಕೆರೆಯನ್ನು ಹತ್ತಾರು ಬಾರಿ ಸರ್ವೆ ಮಾಡಲಾಗಿದ್ದು ಒಂದೊಂದು ಬಾರಿ ಒಂದೊಂದು ಅಳತೆ ಬರುತ್ತಿದೆ. ಈಚೆಗೆ ನಡೆದ ಸರ್ವೆಯಲ್ಲಿ ಗಣಪತಿ ಕೆರೆ 27 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಎಂಬ ವರದಿ ಇದೆ ಎಂದರು.

ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಒಂದೊಮ್ಮೆ ಅಳತೆಯಲ್ಲಿ ಮಸೀದಿ, ರಾಘವೇಂದ್ರ ಮಠ, ಶಂಕರಮಠ ಅಥವಾ ಖಾಸಗಿಯವರು ಒತ್ತುವರಿ ಮಾಡಿದ್ದರೆ ಅದನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಜ.26ರಂದು ರಾಜ್ಯದ 2ನೇ ಬೃಹತ್ ರಾಷ್ಟ್ರಧ್ವಜ ಸ್ತಂಭ ಲೋಕಾರ್ಪಣೆಗೊಳಿಸಲಾಗುತ್ತದೆ. ಬೆಳಗ್ಗೆ 8.15ಕ್ಕೆ ಬೃಹತ್ ರಾಷ್ಟ್ರಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನಡೆಸಲಾಗುತ್ತದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ನಂತರ ಖಾಸಗಿ ಬಸ್ ನಿಲ್ದಾಣ ಲೋಕಾರ್ಪಣೆ, ತಾಲೂಕು ಕಚೇರಿ ಭೂಮಿ ಪೂಜೆ ನಡೆಯಲಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಹಾರ ಮೇಳ, ಪ್ರೊ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಸಂಘ ಪರಿವಾರದ ಪ್ರಮುಖರಾದ ಪಟ್ಟಾಭಿರಾಮ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪಾಲ್ಗೊಳ್ಳುವರೆಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಪ್ರಮುಖರಾದ ಯು.ಎಚ್.ರಾಮಪ್ಪ, ಸಂತೋಷ್ ಶೇಟ್, ಸತೀಶ್ ಮೊಗವೀರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net