ಮಾದರಿ ಮಣ್ಣಿನ ಗಣಪನಿಗೆ ಪೂಜೆ

ganapa
Published on

ಕುಶಾಲನಗರ:

ಶಿರಂಗಾಲ ಗ್ರಾಮದ ಕೋಟೆಯ ಎಸ್.ಆರ್. ಶಿವಪ್ರಸಾದ್ ಮತ್ತು ಚಂಪಕ ದಂಪತಿ ತಮ್ಮ ಮಕ್ಕಳಾದ ಕೃತಿಕಾ ಮತ್ತು ಭರತೇಶ್ ಜತೆಗೂಡಿ ಮನೆಯಲ್ಲಿ ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಿ ಪೂಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಸರ ಸ್ನೇಹಿ ಗಣೇಶೋತ್ಸವದ ಆಂದೋಲನಕ್ಕೆ ಕೈಜೋಡಿಸಿರುವ ರೈತರಾದ

ಎಸ್.ಆರ್. ಶಿವಪ್ರಸಾದ್ ಮತ್ತು ಚಂಪಕ ದಂಪತಿ ತಮ್ಮ ಮಕ್ಕಳಾದ ಕೃತಿಕಾ ಮತ್ತು ಭರತೇಶ್ ಅವರಿಗೆ ಜೇಡಿಮಣ್ಣಿನಿಂದ ಹೇಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ಪೋಷಕರಾದ ಮಾರ್ಗದರ್ಶನ ಮತ್ತು ಸಹಕಾರದಿಂದ ಈ ಇಬ್ಬರು ಮಕ್ಕಳು ಜೇಡಿಮಣ್ಣಿನಿಂದ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ನಾವು ಪರಿಸರಕ್ಕೆ ಹಾನಿಕಾರಕವಾದ ಪಿಓಪಿ ಮತ್ತು ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು. ಆದ್ದರಿಂದ, ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಮನೆಯಲ್ಲೇ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಎಸ್.ಆರ್. ಶಿವಪ್ರಸಾದ್ ತಿಳಿಸಿದರು.

ಎಸ್.ಆರ್. ಶಿವಪ್ರಸಾದ್ ಕುಟುಂಬದ ವತಿಯಿಂದ ತಯಾರಿಸುತ್ತಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಪಿಓಪಿ ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net