

ಮೈಸೂರು: ಅಂಗವಿಕಲ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ರೋಟರಿ ಮೈಸೂರು ಮಿಡ್‌ಟೌನ್ ಸಂಸ್ಥೆ ನ.19 ರಂದು ಓವಲ್ ಮೈದಾನದಲ್ಲಿ ‘ಬಾಂಧವ್ಯ-2022’ ಕ್ರೀಡಾಕೂಟ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್. ನವೀನ್‌ಚಂದ್ರ ಹೇಳಿದರು.
ಕ್ರೀಡಾಕೂಟದಲ್ಲಿ 500 ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಾಮರ್ಥ್ಯ ಹೊಂದಿರುವ ಹಾಗೂ ಕಡಿಮೆ ಸಾಮರ್ಥ್ಯ ಹೊಂದಿರುವ ಮಕ್ಕಳ ಎರಡು ಗುಂಪುಗಳನ್ನು ರಚಿಸಿ ಎರಡು ವಿಭಾಗಕ್ಕೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುವುದು. 8 ರಿಂದ 30 ವರ್ಷ ವಯೋಮಿತಿಯ ಅಂಗವಿಕಲ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ರೀಡಾಕೂಟಕ್ಕೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಂದು ಬೆಳಗ್ಗೆ 9ಕ್ಕೆ ಚಾಲನೆ ನೀಡುವರು. ಅತಿಥಿಗಳಾಗಿ ರೋಟರಿ ಜಿಲ್ಲಾ ಗೌರ‌್ನರ್ ಎಚ್.ಆರ್. ಕೇಶವ್, ಅಂತಾರಾಷ್ಟ್ರೀಯ ಪ್ಯಾರ ಅಥ್ಲೀಟ್ ಆರ್.ಟಿ. ಪ್ರಸನ್ನ ಕುಮಾರ್ ಪಾಲ್ಗೊಳ್ಳುವರು. ಸಂಜೆ 4.30ಕ್ಕೆ ಹಮ್ಮಿಕೊಂಡಿರುವ ಸಮಾರೋಪ ಸಮಾರಂಭದಲ್ಲಿ ಶ್ರೀರಂಗಪಟ್ಟಣ ಡಿವೈಎಸ್‌ಪಿ ಎಸ್.ಎನ್. ಸಂದೇಶ್ ಕುಮಾರ್, ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ. ಕೃಷ್ಣಯ್ಯ, ರೋರಟಿ ಸಹಾಯಕ ಗೌರ‌್ನರ್ ಆರ್. ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಎ.ಎನ್. ಅಯ್ಯಣ್ಣ, ಎಸ್. ಕುಮಾರಸ್ವಾಮಿ, ಜಯಕುಮಾರ್, ಮಿಲ್ಟನ್ , ಎಚ್.ಎಸ್. ವೀರೇಶ್ ಇದ್ದರು.