

ಚಿಕ್ಕಬಳ್ಳಾಪುರ: ಬಿಜೆಪಿ ಮುಖಂಡನ ಲಾಡ್ಜ್ವೊಂದರಲ್ಲಿ ಜೂಜಾಟ ನಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಖ್ಯಾತ ಚಿತ್ರನಟನ ಆಪ್ತ ಸಹಾಯಕ ಸೇರಿ 19 ಜನರನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ಶಾಸಕ, ನಟ ನಂದಮೂರಿ ಬಾಲಕೃಷ್ಣ ಅವರ ಆಪ್ತ ಸಹಾಯಕ ಬಾಲಾಜಿ ಸೇರಿ 19 ಜನರನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಲಾಡ್ಜ್ನಲ್ಲಿ ಈ ಜೂಜಾಟ ನಡೆಯುತ್ತಿತ್ತು.
ಲಾಡ್ಜ್ ಬಿಜೆಪಿ ಮುಖಂಡ ರಂಗನಾಥ್ ಎಂಬವರ ಬಿಎನ್ಆರ್ ಲಾಡ್ಜ್ನಲ್ಲಿ ಈ ಜೂಜಾಟ ನಡೆಯುತ್ತಿದ್ದು, ಬಂಧಿತರಿಂದ 1,56,750 ರೂ. ನಗದು ಹಾಗೂ 4 ಕಾರು ಮತ್ತು 2 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.