

ಪಾವಗಡ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಇಸ್ಪೀಟ್ ಮತ್ತು ಜೂಜಾಟದ ದಂಧೆಗಳ ಮಾಯಾಜಾಲಕ್ಕೆ ಬಡ ಕೂಲಿ ಕಾರ್ಮಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ.
ಪೊಲೀಸರ ನಿರಂತರ ದಾಳಿಯ ನಡುವೆಯೂ ಜೂಜುಕೋರರ ದಂಧೆಗೆ ಕಡಿವಾಣ ಬಿದ್ದಿಲ್ಲ. ತೆರೆಮರೆಯಲ್ಲಿ ಪ್ರಭಾವಿಗಳ ಹೆಸರು ಹೇಳಿಕೊಂಡು ಮುಂಜಾನೆಯಿಂದ ಸಂಜೆವರೆಗೆ ಜೂಜಾಟ ಆಡುತ್ತಿದ್ದು, ವಿರುಪಸಮುದ್ರ, ವೆಂಕಟಾಪುರ, ಅರಸೀಕೆರೆ ಹಾಗೂ ಹುಸೇನ್ ಪುರ ಸೇರಿ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಈ ಧಂದೆ ನಡೆಯುತ್ತಿದೆ.
ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಲ್ಲೆ, ಇಸ್ಪೀಟ್, ಜೂಜಾಟಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ದಿನವೆಲ್ಲ ಕೂಲಿ ಮಾಡಿದ ಹಣವನ್ನು ಜೂಜಿನಲ್ಲಿ ಕಳೆದುಕೊಂಡು ಕುಡಿದು ಮನೆ ಮಂದಿಯೊಂದಿಯೊಂದಿಗೆ ಗಲಾಟೆ ಮಾಡಿಕೊಂಡು ಸಾಕಷ್ಟು ಕುಟುಂಬಗಳು ಬೀದಿಪಾಲಾಗುತ್ತಿವೆ.
ಬಹುತೇಕ ಮನೆ ಯುವಜನರ ಜತೆಗೆ ವಿದ್ಯಾರ್ಥಿಗಳೂ ಈ ಜಾಲಕ್ಕೆ ಸಿಲುಕಿ ಕುಡಿತಕ್ಕೆ ದಾಸರಾಗುತ್ತಿದ್ದು, ಉತ್ತಮ ಭವಿಷ್ಯದ ಕನಸು ಕಮರಿ ಹೋಗುವಂತಾಗಿದೆ. ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಅರಸೀಕೆರೆ, ಮಂಗಳವಾಡ, ವಿರುಪಸಮುದ್ರ, ವೆಂಕಟಪುರ ಹಾಗೂ ಮಾಜರಾಜನಹಳ್ಳಿ, ಅಪ್ಪಾಜಿಹಳ್ಳಿ, ಹುಸೇನ್ ಪುರ ಗಡಿ ಗ್ರಾಮಗಳಲ್ಲಿ ಪ್ರತಿ ನಿತ್ಯ ತರಗತಿಯ ವೇಳಾಪಟ್ಟಿಯಂತೆ ಯಾರ ಭಯವಿಲ್ಲದೆ ರಾಜಾರೋಷವಾಗಿ ಈ ದಂಧೆಯಲ್ಲಿ ತೊಡಗುತ್ತಿದ್ದಾರೆ.
ಕಡಿವಾಣ ಬಿದ್ದಿಲ್ಲ:
-ತಾಲೂಕಿನಲ್ಲಿ ಜೂಜು ಮತ್ತು ಇಸ್ಪೀಟ್ ಅಡ್ಡೆ ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಈ ಹಿಂದೆ ತಾಲೂಕಿನ ಅರಸೀಕೆರೆ, ಗುಮ್ಮಗಟ್ಟ, ಗ್ಯಾದಿಗುಂಟೆ, ಸಾಸಲುಕುಂಟೆ ಸೇರಿ ಹಲವೆಡೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆಯಾದರೂ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ.
ಗಡಿನಾಡಲ್ಲಿ ಹೆಚ್ಜಾದ ದಂಧೆ
--ತಾಲೂಕಿನ ಗ್ರಾಮೀಣ ಭಾಗದಲ್ಲಿ ಯಾರ ಭಯವಿಲ್ಲದೆ ರಾಜಾರೋಷವಾಗಿ ಇಸ್ಪಿಟ್ ದಂಧೆ ನಡೆಯುತ್ತಿದೆ. ಇನ್ನು ಜೂಜುಗಾರರಿಗೆ ಮಾತನಾಡಿದರೆ ನಾವು ಜೂಜಾಟವನ್ನೇ ನಂಬಿ ಬದುಕುತ್ತಿದ್ದೇವೆ. ಅಧಿಕಾರಿಗಳು, ಕಾನೂನು ಏನೇ ಶಿಕ್ಷೆ ನೀಡಿದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ರಾಜಕೀಯವಾಗಿ ಪ್ರಭಾವಿಗಳ ಬೆಂಬಲವಿದೆ. ಯಾವ ಅಧಿಕಾರಿಗಳೂ ಏನು ಮಾಡಲು ಸಾಧ್ಯವಿಲ್ಲ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಜೂಜಾಟ, ಮಟ್ಕಾ, ಇಸ್ಪೀಟ್ ಗೀಳು ಹಚ್ಚಿಕೊಂಡು ಸಾಕಷ್ಟು ಜನ ಮನೆ, ಆಸ್ತಿ ಕಳೆದುಕೊಂಡಿದ್ದಾರೆ. ಪೊಲೀಸರು ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಿ, ದಂಧೆಗೆ ಕಡಿವಾಣ ಹಾಕಬೇಕು.
- ಹೆಸರು ಹೇಳಲು ಇಚ್ಛಿಸದ ಯುವಕ, ವಿರುಪಸಮುದ್ರ
ವಿವಿಧ ಜಿಲ್ಲೆಗಳಿಂದ ಆಗಮನ
ದಿನ ಬೆಳಗಾದರೆ ಸಾಕು ಜೂಜು ಇಸ್ಪೀಟ್ ಆಡುವವರು ದಾವಣಗೆರೆ, ಬಳ್ಳಾರಿ, ಹಿರಿಯೂರು, ಚಿತ್ರದುರ್ಗ ಹಾಗೂ ಮೊಳಕ್ಮೂರು ಸೇರಿ ಆಂಧ್ರದ ಅನಂತಪುರ, ಮಡಕಶಿರಾ ಜಿಲ್ಲೆಗಳಿಂದ ಪ್ರವಾಸಕ್ಕೆ ಬಂದಂತೆ ಕಾರುಗಳಲ್ಲಿ ಬಂದು ವಿ.ಎಚ್.ಪಾಳ್ಯ, ಅರಸೀಕೆರೆ, ಮಂಗಳವಾಡ ಈ ಭಾಗದಲ್ಲಿ ಜೂಜಾಟವಾಡಿ ಕೋಟ್ಯಂತರ ಬೆಲೆ ಬಾಳುವ ಆಸ್ತಿ, ಮನೆ, ಹಣ ಕಳೆದುಕೊಂಡಿದ್ದರೂ ಈ ದಂಧೆಗೆ ಕಡಿವಾಣ ಬಿದ್ದಿಲ್ಲ.
ಸಂತೆಗೆ ಬಂದವರು ಬರಿಗೈಲಿ
ಪಟ್ಟಣದ ಕುರಿ ಸಂತೆಗೆ ಕರ್ನಾಟಕದ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಚಳ್ಳಕೆರೆ, ಮೊಳಕ್ಮೂರು, ಹಿರಿಯೂರು ಸೇರಿ ಆಂಧ್ರದ ಕಲ್ಯಾಣದುರ್ಗ, ಹಿಂದೂಪುರ, ಪೆನುಗೊಂಡೆ, ಗೋರೆಂಟ್ಲಾ, ಮಡಕಶಿರಾದಿಂದ ಸಾವಿರಾರು ರೈತರು ಬಂದು ಮೇಕೆ, ಕುರಿ ಕೋಳಿಗಳನ್ನು ಮಾರಾಟ ಮಾಡಿ ಆ ಹಣವನ್ನು ಜೂಜಾಟಕ್ಕೆ ಬಳಸುತ್ತಿದ್ದಾರೆ. ಕೆಲವರು ಸಂಪೂರ್ಣ ಹಣ ಕಳೆದುಕೊಂಡು ಬರಿಗೈಲಿ ಮನೆಗೆ ವಾಪಸ್ಸಾಗುತ್ತಿದ್ದಾರೆ. ಕುರಿಮಾರಿ ಹಣ ತರುವರೆಂದು ಊರಲ್ಲಿ ಎದುರು ನೋಡುವ ಹೆಂಡತಿ, ಮಕ್ಕಳೊಂದಿಗೆ ಗಲಾಟೆ ಮಾಡುತ್ತಿರುವುದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಅರ್ಧಕ್ಕೆ ಮೊಟಕುಗೊಳ್ಳುವಂತಾಗಿದೆ.