

ಹರಿಹರ: ಗಮಕ ಅಪರೂಪದ ಕಲೆಯಾಗಿದ್ದು, ಎಲ್ಲ ವಯೋಮಾನದವರು ಕಲಿತು, ಉಳಿಸಿ ಬೆಳೆಸಬೇಕು ಎಂದು ಹರಪನಹಳ್ಳಿ ಎಡಿಬಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎ.ಎಂ. ರಾಜಶೇಖರಯ್ಯ ಮನವಿ ಮಾಡಿದರು.
ನಗರದ ಹರಿಹರೇಶ್ವರ ಭವನದಲ್ಲಿ ಲಕ್ಷ್ಮೀಶ ಕಲಾ ಸಂಘದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಕಲಾಶ್ರೀ ಗಂಗಮ್ಮ ಕೇಶವಮೂರ್ತಿ ದತ್ತಿ ಗಮಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಗಮಕ ಕಲಿತವರು ಇಂದು ಉನ್ನತ ಸ್ಥಾನ ಗಳಿಸಿದ್ದಾರೆ. ಇಂದಿನ ಶಿಕ್ಷಕರೂ ಗಮಕ ಕಲಿತು ವಿದ್ಯಾರ್ಥಿಗಳಿಗೆ ಹಳೆಗನ್ನಡ ಪದ್ಯ ಬೋಧಿಸಬೇಕು. ಶಿಕ್ಷಣ ಇಲಾಖೆ ಗಮಕ ಶಿಕ್ಷಕರನ್ನು ನೇಮಿಸಬೇಕು ಅಥವಾ ಸಂಗೀತ ಪರಿಚಯವಿರುವ ಭಾಷಾ ಶಿಕ್ಷಕರಿಗೆ ಗಮಕ ತರಬೇತಿ ನೀಡಬೇಕೆಂದು ಒತ್ತಾಯಿಸಿದರು.
ನಿವೃತ್ತ ಮುಖ್ಯಶಿಕ್ಷಕ ವಿನೋದ್ ಎಸ್. ಹೆಗಡೆ ಮಾತನಾಡಿ, ಈಗಿನ ಮಕ್ಕಳಿಗೆ ಸಮೃದ್ಧವಾದ ಅವಕಾಶ ಮತ್ತು ಸೌಲಭ್ಯಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಹೇಳಿದರು.
ತುಮಕೂರಿನ ಸಾವಿತ್ರಿ ಸತ್ಯೇಂದ್ರ ಮಹಾಭಾರತದ ಕೃಷ್ಣ ಸಂಧಾನದ ಭಾಗ ವಾಚಿಸಿದರು. ಎಸ್‌ಎಸ್‌ಐವಿಎಂ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪಾವಗಡ ರೇಣುಕಾ ಪ್ರಸಾದ್ ವ್ಯಾಖ್ಯಾನಿಸಿದರು.
ಗಮಕಿಗಳಾದ ಸುಜಾತಾ ಗೋಪಿನಾಥ್, ಉಮಾ ಭಟ್ ಶಿಷ್ಯ ಬಳಗದವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು.
ಲಕ್ಷ್ಮೀಶ ಕಲಾ ಸಂಘದ ಅಧ್ಯಕ್ಷ ಎಸ್.ಎಚ್. ಹೂಗಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಉಪಾಧ್ಯಕ್ಷೆ ಚಂದ್ರಲಾ ಸುರೇಶ್ ನಾಯಕ್, ಉಮಾ ಭಟ್, ಎ.ಬಿ. ಮಂಜಮ್ಮ ಇದ್ದರು.