

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಶಿವಮೊಗ್ಗ ಕರ್ನಾಟಕ ಗಮಕ ಕಲಾ ಪರಿಷತ್ ಸಹಕಾರದೊಂದಿಗೆ ಪ್ರಥಮ ಬಾರಿಗೆ ಗಮಕ ದಸರಾವನ್ನು ಅ.6ರಂದು ಬೆಳಗ್ಗೆ 10ರಿಂದ ರಾತ್ರಿ 7ರವರೆಗೆ ಕಮಲಾ ನೆಹರೂ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಗಮಕ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿ ಟಿ.ಆರ್.ಅನುಪಮಾ ಹೇಳಿದರು.
ಗಮಕಾ ದಸರಾದಲ್ಲಿ ವಿಚಾರಗೋಷ್ಠಿ, ರಾಜ್ಯಮಟ್ಟದ ಗಮಕ ಸ್ಪರ್ಧೆ, ಕವಿಕಾವ್ಯ ಪರಿಚಯ, ರಸಪ್ರಶ್ನೆ, ರೂಪಕ, ಹಿರಿಯ ಕಲಾವಿದರಿಂದ ಗಮಕ ವಾಚನ ಹಾಗೂ ವ್ಯಾಖ್ಯಾನ ಕಾರ್ಯಕ್ರಮಗಳು ಜರುಗಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 10ಕ್ಕೆ ಕರ್ನಾಟಕ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಡಾ. ಎ.ವಿ.ಪ್ರಸನ್ನ ಗಮಕ ದಸರಾ ಉದ್ಘಾಟಿಸುವರು. ಕರ್ನಾಟಕ ಗಮಕ ಕಲಾ ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಅಧ್ಯಕ್ಷ ಎಚ್.ಆರ್.ಸುಬ್ರಹ್ಮಣ್ಯಶಾಸ್ತ್ರಿ ಉಪಸ್ಥಿತರಿದ್ದು, ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು ಎಂದರು.
ಸಂಜೆ 6ಕ್ಕೆ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಸಮಾರೋಪ ಭಾಷಣ ಮಾಡುವರು. ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಗಮಕಿ ಮೈಸೂರಿನ ಡಾ. ಎನ್.ಕೆ.ರಾಮಶೇಷನ್ ಮುಖ್ಯ ಅತಿಥಿಯಾಗಿದ್ದು ಕರ್ನಾಟಕ ಗಮಕ ಕಲಾ ಪರಿಷತ್ ಶಿವಮೊಗ್ಗ ಉಪಾಧ್ಯಕ್ಷ ಡಾ. ಕೃಷ್ಣ ಎಸ್.ಭಟ್ ಅಧ್ಯಕ್ಷತೆ ವಹಿಸುವರು ಎಂದರು. ಗಮಕ ಕಲಾ ಪರಿಷತ್‌ನ ಶಿವಮೊಗ್ಗ ಜಿಲ್ಲಾ ಗೌರವಾಧ್ಯಕ್ಷ ಟಿ.ಆರ್.ಅಶ್ವಥ್‌ನಾರಾಯಣ ಶೆಟ್ಟಿ, ಅಧ್ಯಕ್ಷ ಎಚ್.ಆರ್.ಸುಬ್ರಹ್ಮಣ್ಯಶಾಸ್ತ್ರಿ, ಕಾರ್ಯದರ್ಶಿ ಕುಮಾರ ಶಾಸ್ತ್ರಿ, ಶ್ರೀಲಕ್ಷ್ಮೀ ಶಾಸ್ತ್ರಿ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.