

ಮಂಗಳೂರು: ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ ಅಂಗವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಸಿಐಎಸ್‌ಎಫ್‌ನ ಶ್ವಾನದಳದ ಕಾರ್ಯ ಚಟುವಟಿಕೆ ವೀಕ್ಷಿಸುವ ಅವಕಾಶ ಗುರುವಾರ ಲಭಿಸಿತು.
ವಿಮಾನ ನಿಲ್ದಾಣದ ಶ್ವಾನದಳದ ಜೂಲಿ, ಗೋಲ್ಡಿ, ಮ್ಯಾಕ್ಸ್ ಮತ್ತು ರೇಂಜರ್ ತಮ್ಮ ಶಿಸ್ತುಬದ್ಧತೆಯಿಂದ ಪ್ರಯಾಣಿಕರು ಮತ್ತು ಇತರ ಪಾಲುದಾರರನ್ನು ಬೆರಗುಗೊಳಿಸಿದರು. ಜೂಲಿ ಮತ್ತು ಗೋಲ್ಡಿ ಲ್ಯಾಬ್ರಡಾರ್ ಆಗಿದ್ದರೆ, ಮ್ಯಾಕ್ಸ್ ಮತ್ತು ರೇಂಜರ್ ಇತ್ತೀಚೆಗೆ ತಂಡಕ್ಕೆ ಸೇರ್ಪಡೆಗೊಂಡಿದ್ದು ಬೆಲ್ಜಿಯಂ ಮಾಲಿನೋಯಿಸ್ ತಳಿಗೆ ಸೇರಿದೆ.
ಪ್ರತಿಯೊಂದು ಶ್ವಾನವೂ ಆಯಾ ಹ್ಯಾಂಡ್ಲರ್‌ನಿಂದ ಆದೇಶವನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಿತು. ವಿಶೇಷವಾಗಿ ಯಾವುದೇ ಶ್ವಾನಗಳು ಪ್ರಯಾಣಿಕರು ನೀಡಿದ ನೆಚ್ಚಿನ ತಿಂಡಿಯನ್ನೂ ಸ್ವೀಕರಿಸಿಲ್ಲ.
ಬಳಿಕ ಸಿಐಎಸ್‌ಎಫ್‌ನ ಬಾಂಬ್ ನಿಷ್ಕ್ರಿಯದಳ ಮತ್ತು ಪತ್ತೆ ದಳ ಸದಸ್ಯರು ವಿಮಾನಯಾನ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ವಿಮಾನ ನಿಲ್ದಾಣದ ಆಡಳಿತ ಎಎಸ್‌ಜಿ ಸಿಬ್ಬಂದಿಗೆ ಒದಗಿಸಿದ ಆದ್ಯತೆಯ ಉಪಕರಣವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಟರ್ಮಿನಲ್ ಒಳಗೆ ಅನುಕೂಲಕರ ಸ್ಥಳಗಳಲ್ಲಿ ಸ್ಥಾಪಿಸಲಾದ ಸೆಲ್ಫಿ-ಬೂತ್‌ಗಳು ಪ್ರಯಾಣಿಕರನ್ನು ಆಕರ್ಷಿಸಿ ವಿಮಾನ ನಿಲ್ದಾಣಗಳು ಪ್ರಯಾಣಿಸಲು ಸುರಕ್ಷಿತ ಸ್ಥಳವಾಗಿದೆ ಎಂಬುದನ್ನು ಶ್ವಾನದಳ ಸಾಬೀತು ಮಾಡಿತು.