ಬಾನಲ್ಲಿ ಚಿತ್ತಾರ ಬಿಡಿಸಿದ ಗಾಳಿಪಟ!

ಹೆಲಿಪ್ಯಾಡ್ ಪಕ್ಕದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಳಿಪಟ ಸ್ಪರ್ಧೆ’ಯಲ್ಲಿ ಗಮನ ಸೆಳೆದ ನಟ ಪುನೀತ್ ರಾಜ್‌ಕುಮಾರ್ ಭಾವಚಿತ್ರವುಳ್ಳ ಗಾಳಿಪಟ.
1
Published on


ಮೈಸೂರು: ಅಕ್ಷರಶಃ ಅಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು! ಅಲ್ಲಿ ನೆರೆದಿದ್ದ ಮಕ್ಕಳು, ಪಾಲಕರು, ಯುವಕರು, ಯುವತಿಯರೆಲ್ಲ ಸ್ವಚ್ಛಂದವಾದ ಆಕಾಶದಲ್ಲಿ ಗಾಳಿಪಟ ಹಾರಿಸುತ ಸಂಭ್ರಮದಲ್ಲಿ ಮುಳುಗಿದರು…


ಮೈಸೂರು ವೀರಶೈವ ಸಜ್ಜನ ಸಂಘದ ವತಿಯಿಂದ ಹೆಲಿಪ್ಯಾಡ್ ಪಕ್ಕದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ‘24ನೇ ಗಾಳಿಪಟ ಸ್ಪರ್ಧೆ’ಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಗಾಳಿಪಟ ಸ್ಪರ್ಧೆಯಲ್ಲಿ ನಗರದ ನೂರಾರು ಜನ ಭಾಗವಹಿಸಿದ್ದರು. ಹೆಚ್ಚಾಗಿ ಮಕ್ಕಳೇ ಮೈದಾನದ ತುಂಬ ಓಡಾಡುತ್ತಿದ್ದರು. ಮಕ್ಕಳ ಜತೆ ಪಾಲಕರು ಬಂದಿದ್ದರು. ಇನ್ನು ಯುವಕರು, ಯುವತಿಯರು ಗಾಳಿಪಟ ಹಾರಿಸಿದ್ದು ವಿಶೇಷ.


ಅಲ್ಲಿ ಸೇರಿದ್ದ ಮಕ್ಕಳೆಲ್ಲ ನಿರ್ಮಲ ಮನಸ್ಸಿನಿಂದ, ಸ್ನೇಹಿತರೊಂದಿಗೆ ಸೇರಿ ತಮ್ಮ ನೆಚ್ಚಿನ ಆಕೃತಿಯ ಗಾಳಿಪಟಗಳನ್ನು ಬಾನೆತ್ತರಕ್ಕೆ ಹಾರಿಸಿ ಖುಷಿಪಟ್ಟರು. ಅಂತೆಯೆ, ಗಾಳಿಪಟಗಳಿಗೆ ಸೂತ್ರ, ಬಾಲಂಗೋಚಿ, ದಾರ ಕಟ್ಟಿಕೊಡುವ ಮೂಲಕ, ಮಕ್ಕಳ ಸಂಭ್ರಮದಲ್ಲಿ ಪಾಲಕರು ಮತ್ತು ದಸರಾ ಗಾಳಿಪಟ ಉತ್ಸವ ಸಮಿತಿಯ ಸದಸ್ಯರು ಭಾಗಿಯಾದರು.\


ಮಂದಹಾಸ ಮೂಡಿಸಿದ ಪುನೀತ್:
ಹೆಲಿಪ್ಯಾಡ್ ಪಕ್ಕದ ಮೈದಾನದಲ್ಲಿ ಭಾನುವಾರ ನೆರೆದಿದ್ದ ನೂರಾರು ಜನರಿಗೆ ನಟ ಪುನೀತ್ ರಾಜ್‌ಕುಮಾರ್ ಮಂದಹಾಸ ಮೂಡಿಸಿದರು !. ಏನಪ್ಪ ಪುನೀತ್ ನಿಧನರಾಗಿ ತಿಂಗಳುಗಳೆ ಕಳೆದಿದ್ದು, ಮಂದಹಾಸ ಹೇಗೆ ಮೂಡಿಸಿದರು ಎಂದು ಯೋಚಿಸಬೇಡಿ. ಗಾಳಿಪಟ ಸ್ಪರ್ಧೆಯಲ್ಲಿ ಪುನೀತ್ ಭಾವಚಿತ್ರವುಳ್ಳ ಪಟಗಳು ಹಾರಾಡಿದವು. ಅದನ್ನು ಕಂಡ ಅನೇಕರು ಖುಷಿಪಟ್ಟರು. ಕೆಲ ಸಮಯ ಪುನೀತ್‌ರನ್ನು ನೆನೆದರು. ಜತೆಗೆ ಬಣ್ಣ ಬಣ್ಣದ ಚಿಟ್ಟೆ ಪಟ, ವಜ್ರಾಕೃತಿ ಪಟ, ಹದ್ದಿನ ಪಟ, ತ್ರಿಭುಜಾಕೃತಿ ಪಟ, ಅಷ್ಟಾಕೋನಾಕೃತಿ ಪಟ ಸೇರಿದಂತೆ ಅನೇಕ ವಿನ್ಯಾಸದ ಗಾಳಿಪಟಗಳು ಬಾನಿನಲ್ಲಿ ನರ್ತಿಸಿದವು.


ವೈಲ್ಡ್ ಲೈಫ್ ಫೋಟೋಗ್ರಾಫರ್ ಎಂ.ಎನ್.ನಂದಕುಮಾರ್, ಸಂಘದ ಮಾಜಿ ಉಪಾಧ್ಯಕ್ಷ ಎಸ್.ಆರ್.ಜಗದೀಶ್, ಅಧ್ಯಕ್ಷ ಎಸ್.ರಮಾನಂದ, ಗೌರವ ಕಾರ್ಯದರ್ಶಿ ಕೆ.ವಿ.ಪ್ರದೀಪ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net