

ಹುಬ್ಬಳ್ಳಿ: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಕನ್ನಡ ಚಲನಚಿತ್ರ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಹಾಗೂ ಮಡೆನೂರು ಮನು ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯೋಗರಾಜ ಭಟ್ ಅವರ ಅಭಿಮಾನಿಗಳು. ಅವರ ಚಿತ್ರದ ಪ್ರಚಾರಕ್ಕೆ ಓಡಾಡುತ್ತಿದ್ದೇವೆ. ಸುಮಾರು 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಗಾಳಿಪಟ-1ಕ್ಕಿಂತ ಹೆಚ್ಚು ಮನರಂಜನೆ ನೀಡುವ ಚಿತ್ರ ಇದಾಗಿದೆ. ಮೂವರು ಗೆಳೆಯರ ಪ್ರೇಮ ಕತೆಯೇ ಚಿತ್ರದ ಕಥಾ ವಸ್ತುವಾಗಿದೆ. ರೋಚಕ ತಿರುವುಗಳ ನಡುವೆ ನಗೆ ಉಕ್ಕಿಸುವ ಪ್ರಸಂಗಗಳಿವೆ. ಚಿತ್ರದಲ್ಲಿ 6 ಹಾಡುಗಳಿದ್ದು, 3 ಹಾಡು ಈಗಾಗಲೇ ಬಿಡುಗಡೆಯಾಗಿ ಸಾಕಷ್ಟು ಜನಪ್ರಿಯತೆ ಗಳಿಸಿವೆ ಎಂದರು.
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ, ದಿಗಂತ, ಅನಂತನಾಗ್, ಪವನಕುಮಾರ, ಶರ್ವಿುಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ರಂಗಾಯಣ ರಘು, ಸುಧಾ ಬೆಳವಾಡಿ, ಇತರರು ನಟಿಸಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ, ಅರ್ಜುನ ಜನ್ಯ ಅವರ ಸಂಗಿತವಿದೆ. ಚಿತ್ರದ ಕೆಲ ಭಾಗ ಕಜಕಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.