

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಾವೇರಿಯ ಗಳಗನಾಥರ ಹಾಗೂ ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನ ವತಿಯಿಂದ ಕಾದಂಬರಿ ಪಿತಾಮಹ ಗಳಗನಾಥರ 155ನೇ ಜನ್ಮದಿನೋತ್ಸವ ಹಾಗೂ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿನ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಜರುಗಿತು.
ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ 2022-23ನೇ ಸಾಲಿನ ಗಳಗನಾಥ ಪ್ರಶಸ್ತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡ ರೆಡ್ಡಿ ಅವರಿಗೆ ನಾ. ಶ್ರೀ. ರಾಜಪುರೋಹಿತ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರದಾನ ಮಾಡಿದರು. ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿವೆ.
ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ನಾನು ಕಾದಂಬರಿ ಬರೆದಿಲ್ಲ. ಆದಾಗ್ಯೂ ಗಳಗನಾಥ ಹೆಸರಿನ ಪ್ರಶಸ್ತಿ ನೀಡಿದ್ದು ಖಷಿಯಾಗಿದೆ. ಆದರೆ ಇದು ರಾವಣನ ಕೈಯಲ್ಲಿ ಆತ್ಮಲಿಂಗ ಕೊಟ್ಟಂತೆ ಅನುಭವ ನೀಡಿದೆ. ಅನಾಮಿಕರಾಗಿ ಬರಿಯೋದು, ಪ್ರಶಸ್ತಿ ಸ್ವೀಕರಿಸುವುದು ದ್ವಂದ್ವ. ನಾವು ಬರೆದಿದ್ದು ನಮ್ಮ ಮೇಲೆಯೇ ಪ್ರಭಾವ ಬೀರದಿದ್ದಾಗ ಬೇರೆಯವರ ಮೇಲೆ ಪ್ರಭಾವ ಬೀರಲು ಹೇಗೆ ಸಾಧ್ಯ? ಎಂದು ಕಾದಂಬರಿ ಬರೆಯದಿರುವ ಬಗ್ಗೆ ತಮ್ಮನ್ನೇ ಪ್ರಶ್ನಿಸಿಕೊಂಡರು.
ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಿರುವ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದ ಕಾಯ್ಕಿಣಿ, ಭವಿಷ್ಯದಲ್ಲಿ ಕಾದಂಬರಿ ಬರೆಯುವ ಪ್ರಯತ್ನ ಮಾಡುವೆ. ವಿದ್ಯಾರ್ಥಿಗಳಿಗೆ ಗಳಗನಾಥರ ಬಗ್ಗೆ ರುಚಿ ಹಚ್ಚುವ ಕೈಂಕರ್ಯ ನಡೆಯಬೇಕಿದೆ ಎಂದರು.
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಬಳಷ್ಟು ಇಳಿ ವಯಸ್ಸಿನ ವ್ಯಕ್ತಿಗಳಿಗೆ ಪ್ರಶಸ್ತಿ ನೀಡುವುದು ಸಮಂಜಸವಲ್ಲ. ವಯಸ್ಸು ಇದ್ದವರಿಗೆ ಪ್ರಶಸ್ತಿ ನೀಡಿದರೆ ಅದಕ್ಕೆ ಮೌಲ್ಯ ಸಿಗುವುದರ ಜತೆಗೆ, ಯುವಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ನಡೆಯಲಿವೆ ಎಂದರು.
ಡಾ. ದೇವರಕೊಂಡ ರೆಡ್ಡಿ ಮಾತನಾಡಿದರು. ಪ್ರತಿಷ್ಠಾನ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಗಳಗನಾಥ, ಡಾ. ಶ್ರೀರಾಮ ಭಟ್ಟ, ಕೆ.ಆರ್.ಗಣೇಶ, ಶ್ರೀಧರ ಬಳಗಾರ, ಹನುಂತಗೌಡ ಗೊಲ್ಲರ, ಇತರರು ಇದ್ದರು.